ದೇಶಾದ್ಯಂತ ಬಿಸಿಗಾಳಿಗೆ ನೂರಕ್ಕೂ ಅಧಿಕ ಬಲಿ

ಭುವನೇಶ್ವರ,ಎ.21: ಈ ವರ್ಷದ ಬೇಸಿಗೆ ದಿನೇದಿನೇ ಅಸಹನೀಯವಾಗುತ್ತಿದೆ. ಸುಡುಬಿಸಿಲಿಗೆ ಭೂಮಿ ಕಾಯ್ದ ಕೆಂಡದಂತಾಗುತ್ತಿದೆ. ಶಾಲೆಗಳಿಗೆ ರಜ ನೀಡುವ ಮತ್ತು ನಿರ್ಮಾಣ ಕಾಮಗಾರಿಗಳಂತಹ ಹೊರಾಂಗಣ ಕೆಲಸಗಳನ್ನು ನಿಲ್ಲಿಸುವ ಅನಿವಾರ್ಯತೆಯನ್ನೂ ಸುಡುಬೇಸಿಗೆಯ ಧಗೆಯು ಸೃಷ್ಟಿಸಿದೆ. ಇನ್ನೂ ಅರ್ಧ ಬೇಸಿಗೆ ಕಳೆದಿಲ್ಲ. ಆಗಲೇ ದೇಶಾದ್ಯಂತ 100 ಕ್ಕೂ ಅಧಿಕ ಜನರು ಬಿಸಿಗಾಳಿಗೆ ಬಲಿಯಾಗಿದ್ದಾರೆ.ಭಾರತದಲ್ಲಿ ಸಾಮಾನ್ಯವಾಗಿ ಮೇ ಮತ್ತು ಜೂನ್ ಅತ್ಯಂತ ಸುಡುಬಿಸಿಲಿನ ತಿಂಗಳುಗಳಾಗಿವೆ. ಆದರೆ ಕೆಲವು ರಾಜ್ಯಗಳಲ್ಲಿ ತಾಪಮಾನ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್‌ನ್ನೂ ದಾಟಿದೆ. ಇದು ತುರ್ತು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದೆ.
ದಕ್ಷಿಣ ಭಾರತದ ತೆಲಂಗಾಣದಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಅನುಕ್ರಮವಾಗಿ 45 ಮತ್ತು 17 ಜನರು ಬಿಸಿಲಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಯೊಂದೂ ಪ್ರಕರಣವನ್ನು ತಾವು ತನಿಖೆ ನಡೆಸುತ್ತಿದ್ದೇವೆ ಎಂದು ನೆರೆಯ ಒಡಿಶಾದ ಅಧಿಕಾರಿಗಳು ಹೇಳುತ್ತಿದ್ದಾರಾದರೂ, ಆ ರಾಜ್ಯದಲ್ಲಿ ಸುಮಾರು 43 ಜನರು ಬಿಸಿಗಾಳಿಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.
ತೆಲಂಗಾಣದಲ್ಲಿ ಪ್ರಸಕ್ತ ತಿಂಗಳು 2006ರಿಂದೀಚಿಗೆ ಅತ್ಯಂತ ತಾಪಮಾನದ ಎಪ್ರಿಲ್ ಆಗಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ವೈ.ಕೆ.ರೆಡ್ಡಿ ತಿಳಿಸಿದರು. ತೆಲಂಗಾಣದಲ್ಲಿ ಸಾವುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿಯಿದೆ ಎಂದ ಅವರು, ತನ್ನ ಇಲಾಖೆಯು ಬಿಸಿಗಾಳಿ ಎಚ್ಚರಿಕೆಗಳನ್ನು ಹೊರಡಿಸುತ್ತಿದ್ದು,ಜನರಿಗೆ ಮನೆಗಳಲ್ಲೇ ಇರುವಂತೆ ಸಲಹೆ ನೀಡಿದೆ ಎಂದರು.
ತೆಲಂಗಾಣದಲ್ಲಿ ಬೇಸಿಗೆ ರಜೆಗೆ ಮುನ್ನವೇ ಕಳೆದ ವಾರ ಶಾಲೆಗಳನ್ನು ಎರಡು ವಾರಗಳ ಅವಧಿಗೆ ಮುಚ್ಚಲಾಗಿದೆ. ಒಡಿಶಾದಲ್ಲಿ ಎ.26ರವರೆಗೆ ಶಾಲೆಗಳಿಗೆ ರಜೆಯನ್ನು ಘೋಷಿಸಿರುವ ರಾಜ್ಯ ಸರಕಾರವು, ದಿನದ ಸುಡುಬಿಸಿಲಿನ ಅವಧಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಿದೆ.
ಬಿಸಿಲು ಕೆಲವು ಸಣ್ಣಪುಟ್ಟ ವ್ಯಾಪಾರಿಗಳನ್ನೂ ಸಂಕಷ್ಟದಲ್ಲಿ ತಳ್ಳಿದೆ. ಅಂಗಡಿಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಹೆಚ್ಚಿನವರು ಮಧ್ಯಾಹ್ನಕ್ಕೆ ಮುನ್ನವೇ ಬಾಗಿಲುಗಳನ್ನೆಳೆದುಕೊಂಡು ಮನೆಗಳಿಗೆ ಧಾವಿಸುತ್ತಿದ್ದಾರೆ.
ಪಾಕ್‌ನಲ್ಲಿ ಮುನ್ನೆಚ್ಚರಿಕೆ
ಕಳೆದ ವರ್ಷ ಹಲವಾರು ದಶಕಗಳಲ್ಲಿ ಕಾಣದಿದ್ದ ಬಿರುಬಿಸಿಲಿಗೆ ಸಾಕ್ಷಿಯಾಗಿದ್ದ ನೆರೆಯ ಪಾಕಿಸ್ತಾನದಲ್ಲಿ ಬಿಸಿಗಾಳಿಯ ಎಚ್ಚರಿಕೆ ಹೊರಬಿದ್ದರೆ ಜನರಿಗೆ ಆಶ್ರಯ ಮತ್ತು ತಣ್ಣೀರನ್ನು ಒದಗಿಸಲು 500 ಪ್ರತಿಕ್ರಿಯಾ ಕೇಂದ್ರಗಳನ್ನು ಸ್ಥಾಪಿಸಲು ಅಲ್ಲಿಯ ಸರಕಾರವು ಉದ್ದೇಶಿಸಿದೆ. ಈವರೆಗೂ ಅಲ್ಲಿ ಬಿಸಿಲಿನಿಂದ ಯಾವುದೇ ಸಾವು ವರದಿಯಾಗಿಲ್ಲ.
ಕಳೆದ ವರ್ಷ ರಮಝಾನ್ ತಿಂಗಳಲ್ಲಿ 1000ಕ್ಕೂ ಅಧಿಕ ಜನರು ಅಲ್ಲಿ ಸುಡುಬಿಸಿಲಿಗೆ ಬಲಿಯಾಗಿದ್ದರು. ಬಿಸಿಲಿಗೆ ಸಂಬಂಧಿಸಿದ ಕಾಯಿಲೆಗಳು ಏಕಾಎಕಿ ತೀವ್ರಗೊಂಡರೆ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರವು ಸಜ್ಜಾಗುತ್ತಿದೆ ಎಂದು ಕರಾಚಿಯ ಜಿನ್ನಾ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ ಮುಖ್ಯಸ್ಥ ಸೀಮಿನ್ ಜಮಾಲಿ ಸುದ್ದಿಗಾರರಿಗೆ ತಿಳಿಸಿದರು.







