ಯಡಿಯೂರಪ್ಪ ವಿರುದ್ಧ ಸುಪ್ರೀಂಗೆ ಮೇಲ್ಮನವಿ
ಸರಕಾರದ ವಿರುದ್ಧ ಈಶ್ವರಪ್ಪಆಕ್ರೋಶ
ಶಿವಮೊಗ್ಗ,ಎ.21: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸಂಬಂಧಿಸಿದ ಪ್ರಕರಣಗಳ ವಿರುದ್ಧ್ದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವ ರಾಜ್ಯ ಸರಕಾರದ ಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಾಯುಕ್ತರ ವರದಿಯ ಆಧಾರದ ಮೇಲೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಈ ವರದಿಯನ್ನು ನೀಡಿದವರು ಭ್ರಷ್ಟಾಚಾರ ಹಗರಣದಲ್ಲಿ ಪಾಲ್ಗೊಂಡಿದ್ದ ಭಾಸ್ಕರ್‌ರಾವ್ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇಂತಹ ಹಗರಣದ ವ್ಯಕ್ತಿ ನೀಡಿರುವ ವರದಿಯನ್ನು ಇಟ್ಟುಕೊಂಡು ಅದು ಹೇಗೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೋ ಎಂದು ಟೀಕಿಸಿದರು.
ಅರಿವಿಲ್ಲ: ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ಆದರೆ ನಮ್ಮ ಮುಖ್ಯಮಂತ್ರಿಗಳು ಮಹಾರಾಷ್ಟ್ರದಲ್ಲಿ ಇರುವಂತೆ ಬರಗಾಲವಿಲ್ಲ. ಯಾವುದೇ ವಿಶೇಷವಾದ ಪ್ಯಾಕೇಜ್ ನೀಡುವ ಅಗತ್ಯ ಇಲ್ಲ ಎನ್ನುತ್ತಾರೆ. ಇವರ ಈ ಹೇಳಿಕೆ ನೋಡಿದರೆ ಬರಗಾಲದ ಬಗ್ಗೆ ಸಿಎಂಗಿರುವ ಗಂಭೀರತೆ ಎಷ್ಟೆಂಬುವುದು ಗೊತ್ತಾಗುತ್ತದೆ ಎಂದು ಕುಟುಕಿದರು.





