ಬದರ್ ಮಸೀದಿ ಆಡಳಿತ ಬಿಕ್ಕಟ್ಟು ಅಂತ್ಯ
ಉಪವಿಭಾಗಾಧಿಕಾರಿ ಮಧ್ಯ ಪ್ರವೇಶ

ಸಾಗರ, ಎ.21: ಇಲ್ಲಿನ ಬದರ್ ಮಸೀದಿ ಆಡಳಿತ ಬಿಕ್ಕಟ್ಟು ಅಂತ್ಯ ಗೊಂಡಿದ್ದು, ಮಂಗಳವಾರ ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ತಹಶೀಲ್ದಾರ್ ಅವರು ಕಾನೂನು ಕ್ರಮವಹಿಸಿ ಅಡ್-ಹಾಕ್ ಸಮಿತಿಗೆ ನೂತನ ಆಡಳಿತದ ಜವಾಬ್ದಾರಿ ನೀಡಲಾಗಿದೆ. ಏನಿದು ಬಿಕ್ಕಟ್ಟು ?: ಬದರ್ ಮಸೀದಿ ಹಿಂದಿನ ಆಡಳಿತ ಅವಧಿ ಜ.27, 2016 ಕ್ಕೆ ಕೊನೆಗೊಂಡಿತ್ತು. ಆದರೂ ಅಧ್ಯಕ್ಷರಾಗಿದ್ದ ಮುಹಿಯುದ್ದೀನ್ ಗಂಗೊಳ್ಳಿಯವರ ಸಮಿತಿ ಅಧಿಕಾರ ಹಸ್ತಾಂತರಿಸಿರಲಿಲ್ಲ. ನಿಯಮದಂತೆ ಸಮಿತಿ ಸರ್ವ ಸದಸ್ಯರ ಸಭೆಯನ್ನೂ ಕರೆದಿರಲಿಲ್ಲ. ಈ ಹಂತದಲ್ಲಿ ವಕ್ಫ್‌ಬೋರ್ಡ್ ಫೆ.3, 2016 ರಂದು 8 ಜನರ ಅಡ್-ಹಾಕ್ ಸಮಿತಿ ರಚಿಸಿ ಅಧ್ಯಕ್ಷರನ್ನಾಗಿ ಎಚ್.ಹಂಝಾ ಅವರನ್ನು ನೇಮಿಸಿತ್ತು. ಆದರೆ ಹಿಂದಿನ ಸಮಿತಿಯವರು ಅಡ್-ಹಾಕ್ ಸಮಿತಿ ಕಾನೂನುಬಾಹಿರವೆಂದು ತಿಳಿಸಿ ಯಾವುದೇ ಅಧಿಕಾರ ನೀಡಲು ಅಸಮ್ಮತಿಸಿತ್ತು. ಇದರ ವಿರುದ್ಧ ಹಂಝಾ ಅವರು ವಕ್ಫ್‌ಬೋರ್ಡ್‌ನ ಆದೇಶದಂತೆ ತಮಗೆ ಅಧಿಕಾರ ನೀಡಬೇಕೆಂದು ಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಬದರ್ ಮಸೀದಿ ವಕ್ಫ್ ಬೋರ್ಡ್ ಆಡಳಿತಕ್ಕೆ ಒಳಪಟ್ಟಿರುತ್ತದೆ. ಜೊತೆಗೆ ಹೆಚ್ಚಿನ ಆಸ್ತಿಯನ್ನು ಸಹ ಹೊಂದಿದೆ. ಈ ಆಸ್ತಿ ನಿರ್ವಹಣೆಯನ್ನು ಮಸೀದಿ ಹಿಂದಿನಿಂದಲೂ ಮಾಡಿ ಕೊಂಡು ಬಂದಿದೆ. ಅವಧಿ ಮುಗಿದು, ಅಧಿಕಾರ ಕಳೆದು ಕೊಂಡಿ ರುವ ಸಮಿತಿಯು ಬಾಡಿಗೆದಾರರನ್ನು ಹೆದರಿಸಿ, ಬಾಡಿಗೆ ವಸೂಲಿ ಮಾಡುತ್ತಿದೆ. ಜೊತೆಗೆ ನೂತನ ಸಮಿತಿ ವಿರುದ್ಧ ಸುಳ್ಳು ದೂರು ಸೃಷ್ಟಿಸುತ್ತಿದೆ. ಇದು ಸತ್ಯಕ್ಕೆ ದೂರವಾದುದು. ಧರ್ಮ ಗುರುಗಳಾದ ಶಾಫಿ ಸಹದಿ ಅವರು ವಕ್ಫ್‌ಬೊರ್ಡಿನ ಸದಸ್ಯರು. ಅವರು ಎಲ್ಲ ಸಂಘರ್ಷವನ್ನು ನಿವಾರಿಸಲು ಪ್ರಯತ್ನ ಪಟ್ಟಿದ್ದರೂ ಅವರ ವಿರುದ್ಧ ದೂರಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಹಿಂದಿನ ಬದರ್ ಮಸೀದಿ ಆಡಳಿತ ಸಮಿತಿ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ. ಮೂರುವರ್ಷ, ಒಂಬತ್ತು ತಿಂಗಳ ಅವಧಿಯಲ್ಲಿ ಲೆಕ್ಕ ನೀಡಿಲ್ಲ. ಆಡಿಟ್ ವರದಿಯನ್ನು ಸಲ್ಲಿಸದೆ ವಿನಾಕಾರಣ ಸಮಾಜದವರ ಮೇಲೆ ಹಾಗೂ ಹೊಸ ಅಡ್-ಹಾಕ್ ಸಮಿತಿಯ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಕೋರಿಕೊಂಡಿದ್ದರು. ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿಗಳು ಅಡ್-ಹಾಕ್ ಸಮಿತಿಗೆ ಅಧಿಕಾರ ನೀಡುವಂತೆ ಸೂಚಿಸಿದರು. ಮಂಗಳವಾರ ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್ ಹಾಗೂ ಸಿಪಿಐ ಪಾಟೀಲ್ ಮತ್ತು ಸಿಬ್ಬಂದಿ ಮಸೀದಿ ಬಳಿ ತೆರಳಿ ಹಂಝಾ ಅವರಿಗೆ ಅಧಿಕಾರ ನೀಡಲು ತಿಳಿಸಿದರು. ಮಸೀದಿಗೆ ಆದಾಯ ಮೂಲವಾದ ವ್ಯಾಪಾರ ಮಳಿಗೆಗಳ ಬಾಡಿಗೆದಾರರಿಗೆ ಫೆಬ್ರವರಿ 2016ರಿಂದ ಬಾಡಿಗೆಯನ್ನು ಅಡ್-ಹಾಕ್ ಸಮಿತಿಗೆ ನೀಡುವಂತೆ ತಿಳಿಸಿದರು. ಶಾದಿಮಹಲ್ ಹಾಗೂ ಆಡಳಿತ ಕಚೇರಿಗಳ ಬೀಗ ತೆಗೆಸಿ ಮಹಜರ್ ನಡೆಸುವ ಮೂಲಕ ಅಡ್-ಹಾಕ್
ಸಮಿತಿ ಸುಪರ್ದಿಗೆ ಅಧಿಕಾರಿಗಳು ಒಪ್ಪಿಸಿದರು. ಬದರ್ ಮಸೀದಿ ಆಡಳಿತ ಬಿಕ್ಕಟ್ಟು ಅಂತ್ಯಗೊಂಡಿದ್ದು, ಮುಂದೆ ಒಟ್ಟಾಗಿ ಕೆಲಸ ಮಾಡಿ ಸಮಾಜದ ಒಳಿತನ್ನು ಸಾಧಿಸುವತ್ತ ಗಮನ ಹರಿಸಲಿ ಎಂದು ಜನರಾಡಿಕೊಳ್ಳುತ್ತಿದ್ದರು.







