ಗ್ರಾಮಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಶ್ರಮಿಸಬೇಕು: ಶಾಸಕ ವೈ.ಎಸ್.ವಿ. ದತ್ತ

ಕಡೂರು, ಎ.21: ಗ್ರಾಮಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಶ್ರಮಿಸಬೇಕಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಅವರು ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ 1,25,47 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಅನುದಾನದಲ್ಲಿ 1.2 ಕಿಮೀ ಉದ್ದದ ರಸ್ತೆ, ಚರಂಡಿ ಕಾಮಗಾರಿಗಳು ನಡೆಯಲಿವೆ. ಗ್ರಾಮದ ಚಾಮುಂಡೇಶ್ವರಿ ಬಡಾವಣೆ ರಸ್ತೆ ಮತ್ತು ಕೆರೆ ದುರಸ್ತಿಗಾಗಿ 50 ಲಕ್ಷ ರೂ. ಅನುದಾನ ಬಂದಿದೆ. ಬರಗಾಲದಿಂದ ತತ್ತರಿಸಿರುವ ರೈತರು ಬೆಳೆ ನಷ್ಟದ ಪರಿಹಾರದ 18 ಕೋಟಿ ರೂ. ತಾಲೂಕಿಗೆ ಬಂದಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದರು.
ತಾಲೂಕಿನಲ್ಲಿ ಎರಡು ರಾಜ್ಯ ಹೆದ್ದಾರಿ ರಸ್ತೆಗಳಿದ್ದು ಇವುಗಳ ಅಭಿವೃದ್ಧಿಗೆ 36 ಕೋಟಿ ರೂ. ಅನುದಾನ ಬಂದಿದ್ದು, 10 ತಿಂಗಳಲ್ಲಿ ಸುಂದರ ರಸ್ತೆಗಳಾಗಲಿವೆ. ಕ್ಷೇತ್ರದ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದ ಅನುದಾನ ರಸ್ತೆ ಅಭಿವೃದ್ಧಿಗೆ ಬಂದಿರುವುದು ಇದೇ ಪ್ರಥಮ. ಗ್ರಾಮಾಂತರ ಪ್ರದೇಶಗಳ ರಸ್ತೆ ಬಿವೈಎಸ್‌ಎಸ್‌ಗೆ ಅನುದಾನ ಮಂಜೂರಾಗಿದ್ದು, ಸಿಂಗಟಗರೆ ಸರ್ಕಲ್‌ನಿಂದ ತಾಂಡ್ಯವರೆಗೆ ಜೋಡಿರಸ್ತೆ ನಿರ್ಮಾಣಗೊಳ್ಳಲಿದೆ. ಗ್ರಾಮದ ಕೆರೆ ಅಭಿವೃದ್ದಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ತರಲಾಗುವುದು ಎಂದು ನುಡಿದರು.
ಸುವರ್ಣ ಗ್ರಾಮ ಯೋಜನೆ ರದ್ದುಪಡಿಸಿದ ಕೀರ್ತಿ ಸಿದ್ದರಾಮಯ್ಯ ಸರಕಾರದ್ದಾಗಿದೆ. ಗ್ರಾಮ ವಿಕಾಸ ಯೋಜನೆಯಡಿ ಶೆಟ್ಟಿಹಳ್ಳಿ, ಬಿಟ್ಟೇನಹಳ್ಳಿ, ಎಸ್.ಮಾದಾಪುರ, ಗ್ರಾಮಗಳನ್ನು ಸೇರಿಸಲಾಗಿದೆ. ಶಾಸಕರಾದ 3 ವರ್ಷದಲ್ಲಿ ಸುಮಾರು 138 ಕೋಟಿ ರೂ. ಅನುದಾನವನ್ನು ತಾಲೂಕಿಗೆ ತಂದಿದ್ದೇನೆ. ಯಾವುದೇ ಗಿಮಿಕ್ ರಾಜಕಾರಣ ನಡೆಸುವುದಿಲ್ಲ. ವಂಶ ಪಾರಂಪರೆ ರಾಜಕಾರಣವೂ ನಮ್ಮದಲ್ಲ ಎಂದರು.
ಸಮಾರಂಭದಲ್ಲಿ ಸಿಂಗಟಗೆರೆ ಜಿಪಂ ಸದಸ್ಯ ಕೆ.ಆರ್.ಮಹೇಶ್‌ಒಡೆಯರ್, ಗ್ರಾಪಂ ಅಧ್ಯಕ್ಷ ಕುಮಾರ್, ನಾಗರಾಜಪ್ಪ, ಬಿದರೆ ಜಗದೀಶ್, ಪಾಪಣ್ಣ, ದೇವರಾಜ್, ಗುತ್ತಿಗೆದಾರ ಪಂಚನಹಳ್ಳಿ ಬಾಬಣ್ಣ, ಸಿಂಗಟಗೆರೆ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.







