ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ

ಚಿಕ್ಕಮಗಳೂರು, ಎ.21: ಭೀಕರ ಬರಗಾಲದಿಂದ ರೈತರು ವಿವಿಧ ಸಂಕಷ್ಟಗಳನ್ನು ಎದುರಿಸುತ್ತಿದ್ದು, ತಮ್ಮ ಹಲವು ಬೇಡಿಕೆಗಳನ್ನು ತಕ್ಷಣ ಈಡೇರಿಸಿ ಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ನೂತನ ತಾಲೂಕು ಕಚೇರಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕು. ಸರಳ ಸಾಲದ ನೀತಿ ಜಾರಿಗೊಳಿಸಿ, ರೈತರಿಗೆ ಹೆಚ್ಚು ಸಾಲ ನೀಡಬೇಕು. ಬರಗಾಲವನ್ನು 3 ಭಾಗಗಳಾಗಿ ವಿಂಗಡಿಸಿ, ಅತಿವೃಷ್ಟಿ, ಅನಾವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಬೇಕು. ಅಂತರ್ಜಲ ಮಟ್ಟವನ್ನು ವೃದ್ಧಿಸಲು ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕಿಸಲು ಕೃಷಿ ಆಯೋಗವು ತನ್ನ ವರದಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕಬ್ಬಿನ ಬೆಲೆಗೆ ಕನಿಷ್ಠ 2650 ರೂ. ಬೆಲೆಯನ್ನು ನಿಗದಿಪಡಿಸಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿನ ಎಲ್ಲ ಭಾಗಗಳಿಗೂ ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಮಳಲೂರು ಏತ ನೀರಾವರಿ ಕರಗಡ ಕುಡಿಯುವ ನೀರು ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ತಾಲೂಕು ಹಾಗೂ ಜಿಲ್ಲಾದ್ಯಂತ ಅನುಮತಿ ಇಲ್ಲದೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಹಾಗೂ ಜೆಲ್ಲಿ ಕ್ರಷರ್‌ಗಳನ್ನು ನಿಲ್ಲಿಸಬೇಕು, ಅಲ್ಲದೇ ಅನುಮತಿ ಇಲ್ಲದೆ ದೊಡ್ಡ ಪ್ರಮಾಣದ ಸ್ಪೋಟಕ ಸಿಡಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಿ ಅಗತ್ಯವಿರುವ ಗ್ರಾಹಕರಿಗೆ ತಕ್ಷಣವೇ ಮರಳು ಪೂರೈಕೆ ಮಾಡಬೇಕು. ಅರಣ್ಯ ಭೂಮಿ, ಕಂದಾಯ ಭೂಮಿಗಳ ಜಂಟಿ ಸರ್ವೇ ಮಾಡಿ ಗಡಿರೇಖೆ ಗುರುತಿಸಿ ಕೊಡಬೇಕುಎಂದು ಒತ್ತಾಯಿಸಿದ್ದಾರೆ





