ಜಾಯ್ ಐಸ್‌ಕ್ರೀಂ-ಪ್ರೆಸ್ಟೀಜ್ ಪ್ರಕರಣ: ಅರ್ಜಿ ವಜಾ
ಬೆಂಗಳೂರು, ಎ.21: ಜಾಯ್ ಐಸ್‌ಕ್ರೀಂ-ಪ್ರೆಸ್ಟೀಜ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾ. ರಾಮಮೋಹನರೆಡ್ಡಿ ಅವರಿದ್ದ ನ್ಯಾಯಪೀಠವು ವಜಾಗೊಳಿಸಿದೆ.
ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವಗ್ರಹ ಪೀಡಿತವಾಗಿ ಸಾರ್ವಜನಿಕರ ಮುಂದೆ ಸಮಾಜ ಪರಿವರ್ತನೆ ಸಮುದಾಯ ಸಂಘಟನೆಯ ಮುಖ್ಯಸ್ಥ ಎಸ್.ಆರ್.ಹಿರೇಮಠ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಪ್ರಕರಣವನ್ನು ನ್ಯಾಯಾಲಯ ಅಥವಾ ನ್ಯಾಯಪೀಠವು ಪಾರದರ್ಶಕತೆ ಮತ್ತು ನಿಷ್ಪಕ್ಷಪಾತವಾಗಿ ಗಮನಿಸಿದ್ದು, ಯಾವುದೇ ಪೂರ್ವಗ್ರಹಪೀಡಿತ, ಪಕ್ಷಪಾತ ಮಾಡದೆಯೇ ಕಕ್ಷಿದಾರರ ವಕೀಲರಿಗೆ ಹೇಳಿಕೆ ಹಾಗೂ ವಾದ ಮಂಡನೆಗೆ ಸಂಪೂರ್ಣ ಅವಕಾಶ ಕಲ್ಪಿಸಿದೆ. ನ್ಯಾಯಪೀಠವು ಎಲ್ಲ ರೀತಿಯ ಅವಕಾಶ ಹಾಗೂ ಮಾನದಂಡ ಕಲ್ಪಿಸಿ, ಅವಕಾಶ ನೀಡಿ, ಅರ್ಜಿಯನ್ನು ಸಮರ್ಪಕ ಮತ್ತು ತೃಪ್ತಿಕರವಾಗಿ ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಐದು ಸಂಪುಟಗಳ ದಾಖಲೆಗಳನ್ನು ಪರಿಶೀಲಿಸಿದ್ದಾಗ್ಯೂ, ಯಾವುದೇ ಸಾಕ್ಷ್ಯ ಮತ್ತು ಗುರುತರ ಆಧಾರವಿಲ್ಲದೆಯೇ ಅನಗತ್ಯವಾಗಿ ನ್ಯಾಯಪೀಠದ ಮೇಲೆ ಆರೋಪ ಮಾಡಲಾಗಿದೆ.
ಹೀಗಾಗಿ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿ ಸಲ್ಲಿಸಲಾಗಿರುವ ಮಧ್ಯಾಂತರ ಅರ್ಜಿಯನ್ನು ವಜಾಗೊಳಿಸಿರುವುದಾಗಿ ನ್ಯಾ. ರಾಮಮೋಹನ್ ರೆಡ್ಡಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
26ರಂದು ತೀರ್ಪು: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಆರ್. ಹಿರೇಮಠ ವಿರುದ್ಧ ದಾಖಲಿಸಿಕೊಳ್ಳಲಾಗಿರುವ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಪೀಠವು, ದಿ.26ರಂದು ತನ್ನ ತೀರ್ಪು ಪ್ರಕಟಿಸಲಿದೆ.





