ನಟಿ ಮಾಲಾಶ್ರೀಗೆ ಕಣ್ಣೀರು ತರಿಸಿದ ‘ಉಪ್ಪು ಹುಳಿ ಖಾರ’

ಬೆಂಗಳೂರು, ಎ. 21: ‘ನಿಮ್ಮ ಅಭಿನಯ ತೃಪ್ತಿಕರವಾಗಿಲ್ಲ’ವೆಂದು ಹಿರಿಯ ನಟಿ ಮಾಲಾಶ್ರೀಗೆ ಅವಮಾನಿಸಿದ್ದು, ಪಡೆದಿರುವ ಸಂಭಾವನೆ ವಾಪಸ್ ನೀಡಬೇಕೆಂದು ನಿರ್ಮಾಪಕ ಕೆ.ಮಂಜು ಕೇಳಿದ್ದಾರೆ ಎಂದು ನಟಿ ಮಾಲಾಶ್ರೀ ಸುದ್ದಿಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಗುರುವಾರ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಮಾಲಾಶ್ರೀ, ನಿರ್ಮಾಪಕ ಕೆ.ಮಂಜು ಅವರ ‘ಉಪ್ಪು ಹುಳಿ ಖಾರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದೆ. ಆದರೆ, ಅವರು ‘ನಿಮ್ಮ ಅಭಿನಯ ತೃಪ್ತಿಕರವಾಗಿಲ್ಲ’ ಎಂದು ಎಸ್‌ಎಂಎಸ್ ಸಂದೇಶ ರವಾನಿಸಿ ಅವಮಾನಿಸಿದ್ದಾರೆ ಎಂದರು.
‘ನನ್ನ ಇಪ್ಪತ್ತೈದು ವರ್ಷಗಳ ಸಿನೆಮಾ ಜೀವನದಲ್ಲಿ ಇಂತಹದೊಂದು ಅವಮಾನವನ್ನು ತಾನೆಂದು ಎದುರಿಸಿರಲಿಲ್ಲ. ಎರಡು ದಿನ ಚಿತ್ರೀಕರಣ ಮಾಡಿದ ಮೇಲೆ ಚಿತ್ರದ ನಿರ್ದೇಶಕ ಇಮ್ರಾನ್ ಎಂಬವರು ‘ಮಂಜು ಅವರಿಗೆ ನಿಮ್ಮ ನಟನೆ ತೃಪ್ತಿ ತಂದಿಲ್ಲ. ಹೀಗಾಗಿ ನೀವು ಪಡೆದಿರುವ ಸಂಭಾವನೆ ಹಿಂದಿರುಗಿಸಿ’ ಎಂದು ಸಂದೇಶ ಕಳುಹಿಸಿದ್ದಾರೆ’ ಎಂದು ಭಾವುಕರಾದರು.
ಇದೇ ಸಂದರ್ಭದಲ್ಲಿ ನಟಿ ಮಾಲಾಶ್ರೀ ಮಾಧ್ಯಮಗಳ ಮುಂದೆಯೇ ಕೆ.ಮಂಜುಗೆ ಕರೆ ಮಾಡಿ, ‘ನನ್ನ ಅಭಿನಯ ತೃಪ್ತಿಕರವಾಗಿಲ್ಲ’ ಎಂದು ಸಂದೇಶ ಕಳುಹಿಸಿದ್ದೇಕೆ. ನಟರಿಗೆ ಹೀಗೆ ಅವಮಾನ ಸಲ್ಲ. ನಿಮಗೆ ಧೈರ್ಯವಿದ್ದರೆ ನನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬನ್ನಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.





