ದಲಿತ ಸಿಎಂ ಸ್ಥಾನಕ್ಕೆ ಖರ್ಗೆ ಸೂಕ್ತ: ವಿಶ್ವನಾಥ್

ಬೆಂಗಳೂರು, ಎ. 21: ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯಾಗುವ ವಿಚಾರದಲ್ಲಿ ಎರಡು ಮಾತಿಲ್ಲ. ಆದರೆ, ಯಾರು ದಲಿತ ಸಿಎಂ ಆಗಬೇಕೆನ್ನುವ ಪ್ರಶ್ನೆ ಬಂದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಸೂಕ್ತ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಗುರುವಾರ ನಗರದ ಶಾಸಕರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಆಯೋಜಿಸಿದ್ದ, ಬೂಸಾ ಚಳವಳಿಯ ನೇತಾರ ಬಿ. ಬಸವಲಿಂಗಪ್ಪನವರ ಜನ್ಮದಿನದ ಅಂಗವಾಗಿ ‘ದಲಿತ ರಾಜಕಾರಣ- ದಲಿತ ಹೋರಾಟದ ಮುಂದಿನ ಹೆಜ್ಜೆಗಳು’ ಒಂದು ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರಕಾರ ಪರಿಶಿಷ್ಟ ಜಾತಿ-ಪಂಗಡದ ಪ್ರಗತಿಗಾಗಿ ಶ್ರಮಿಸಿಲ್ಲ ಎಂದು ಹೇಳಲು ಹೋಗುವುದಿಲ್ಲ. ಆದರೆ, ಕರ್ನಾಟಕ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಲೋಕಾ ಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷೆ ಎಂ.ಪ್ರಭಾವತಿ, ದಸಂಸ ರಾಜ್ಯ ಒಕ್ಕೂಟದ ಕಾರ್ಯಾಧ್ಯಕ್ಷ ಆರ್.ಮೋಹನ್‌ರಾಜ್, ಪ್ರೊ.ನಾಗರಾಜ್, ಮುಖಂಡರಾದ ಬಸವರಾಜ್‌ಕೌತಾಳ್, ಎಂ.ಸಿ.ನಾರಾಯಣ್, ಎಚ್.ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.





