ಅನಂತ್‌ನಾಗ್-ಉತ್ತರ 24 ಪರಗಣ ಜಿಲ್ಲೆಗಳಿಗೆ ಪ್ರಧಾನ ಮಂತ್ರಿ ಪ್ರಶಸ್ತಿ
ಸರಕಾರಿ ಯೋಜನೆಗಳ ಜಾರಿ
ಹೊಸದಿಲ್ಲಿ, ಎ.21: ಜಮ್ಮು-ಕಾಶ್ಮೀರದ ಅನಂತ್‌ನಾಗ್ ಹಾಗೂ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗಳು ಮತ್ತು ಚಂಡಿಗಡ ಸ್ವಚ್ಛ ಭಾರತದಂತಹ ಎನ್‌ಡಿಎ ಸರಕಾರದ ಆದ್ಯತೆಯ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ಜಾರಿಗೊಳಿಸಿದುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಪ್ರಶಸ್ತಿಗಳನ್ನು ಪಡಿದಿವೆ.
ಅಸ್ಸಾಂನ ನಾಗಂವ್,ರಾಜಸ್ಥಾನದ ಬಿಕಾನೇರ್,ಪಶ್ಚಿಮ ಸಿಕ್ಕಿಂ ಜಿಲ್ಲೆ,ಆಂಧ್ರ ಪ್ರದೇಶದ ಅನಂತಪುರಂ,ದಾದ್ರ ಮತ್ತು ನಗರ ಹವೇಲಿ, ಛತ್ತೀಸ್‌ಗಡದ ಬಲರಾಂಪುರ, ಮತ್ತು ಹಿಮಾಚಲ ಪ್ರದೇಶದ ಹಮೀರ್‌ಪುರಗಳಿಗೂ ಪ್ರಶಸ್ತಿಗಳು ಲಭಿಸಿವೆ.
ಅನಂತ್‌ನಾಗ್ ಆಡಳಿತಕ್ಕೆ ಜಿಲ್ಲೆಯ 1,500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಕಟ್ಟಿಸಿದುದಕ್ಕಾಗಿ ಈಶಾನ್ಯ ಮತ್ತು ಪರ್ವತ ರಾಜ್ಯಗಳಗಾಗಿರುವ ಸ್ವಚ್ಛ ವಿದ್ಯಾಲಯ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.
ಆದ್ಯತೆಯ ಕಾರ್ಯಕ್ರಮಗಳ ಜಾರಿಗಾಗಿ ಪ್ರಧಾನ ಮಂತ್ರಿಯ ವಿಶೇಷ ಪ್ರಶಸ್ತಿಗಳನ್ನು ನಾಗರಿಕ ಸೇವೆಗಳ ದಿನದಂದು ಇದೇ ಮೊದಲ ಸಲ ನೀಡಲಾ ಗಿದೆ.ಪ್ರಶಸ್ತಿಗಳನ್ನು, ಪ್ರಧಾನ ಮಂತ್ರಿ ಜನ್‌ಧನ್ ಯೋಜನಾ(ಪಿಎಂಜೆಡಿವೈ), ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ), ಸ್ವಚ್ಛ ವಿದ್ಯಾಲಯ ಹಾಗೂ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಗಳೆಂಬ 4 ವಿಭಾಗಗಳಲ್ಲಿ ಕೊಡಲಾಗಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗೆ ‘ಇತರ ರಾಜ್ಯಗಳು’ ವರ್ಗದಲ್ಲಿ ಪಿಎಂಜೆಡಿವೈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರದಾನಿಸಲಾಗಿದೆ.ಅಸ್ಸಾಂನ ನಾಗಂವ್ ಹಾಗೂ ಚಂಡಿಗಡಗಳೂ ಈ ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ಪ್ರಶಸ್ತಿಗಳಿಗೆ ಭಾಜನವಾಗಿವೆ.
ರಾಜಸ್ಥಾನದ ಬಿಕಾನೇರ್ ಹಾಗೂ ಪಶ್ಚಿಮ ಸಿಕ್ಕಿಂ ಜಿಲ್ಲೆಗಳು ಸ್ವಚ್ಛಭಾರತ ಅಭಿಯಾನ (ಗ್ರಾಮೀಣ) ವಿಭಾಗದಲ್ಲಿ ಪ್ರಶಸ್ತಿ ಗಳಿಸಿವೆ.
ಆಂಧ್ರಪ್ರದೇಶದ ಅನಂತಪುರಂ ಹಾಗೂ ದಾದ್ರಾ ಮತ್ತು ನಗರ ಹವೇಲಿ ಆಡಳಿತಗಳಿಗೆ ಶೌಚಾಲಯಗಳ ನಿರ್ಮಾಣಕ್ಕಾಗಿ ಸ್ವಚ್ಛವಿದ್ಯಾಲಯ ಪ್ರಶಸ್ತಿಗಳು ಲಭಿಸಿವೆ.
ಛತ್ತೀಸ್‌ಗಡದ ಬಲರಾಂಪುರ ಹಾಗೂ ಹಿಮಾಚಲ ಪ್ರದೇಶದ ಹಮೀರ್‌ಪುರಗಳು ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಜಾರಿಯಲ್ಲಿ ಅತ್ಯುತ್ತಮ ಜಿಲ್ಲೆಗಳೆಂದು ತೀರ್ಮಾನಿಸಲ್ಪಟ್ಟಿದೆ.







