ಕ.ಪುರೋಹಿತ್ ಕೇಳಿದ ದಾಖಲೆ ನೀಡುವಂತೆ ಸೇನೆಗೆ ಪಾರಿಕ್ಕರ್ ಸೂಚನೆ
ಮಾಲೆಗಾಂವ್ ಸ್ಫೋಟ ಆರೋಪಿ
ಹೊಸದಿಲ್ಲಿ, ಎ.21: ಮಾಲೆಂಗಾವ್ ಸ್ಫೋಟ ಪ್ರಕರಣದಲ್ಲಿ ತನ್ನ ಅಮಾಯಕತ್ವವನ್ನು ಸಾಬೀತುಪಡಿಸಲು ಲೆ.ಕ.ಪ್ರಸಾದ್ ಪುರೋಹಿತ್ ಕೋರಿರುವ ಎಲ್ಲ ದಾಖಲೆಗಳನ್ನು ಒದಗಿಸುವಂತೆ ತಾನು ಸೇನೆಗೆ ಸೂಚಿಸಿದ್ದೇನೆಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಇಂದು ತಿಳಿಸಿದ್ದಾರೆ.
ಪ್ರಕರಣವು ನ್ಯಾಯಾಲಯದಲ್ಲಿದ್ದು, ತಾನದರ ಅರ್ಹತೆಯನ್ನು ನಿರ್ಧರಿಸುವಂತಿಲ್ಲ ಎಂದು ಪ್ರತಿಪಾದಿಸಿದ ಅವರು, ಪುರೋಹಿತ್ ಬಯಸಿರುವ ಎಲ್ಲ ಮಾಹಿತಿಯನ್ನು ಒದಗಿಸುವಂತೆ ತಾನು ಸೇನೆಗೆ ತಿಳಿಸಿದ್ದೇನೆ ಎಂದರು. ಪುರೋಹಿತ್ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾರೆ.
ಜನರ ಮಾತುಗಳು, ದೇಶಗಳ ಹೆಸರುಗಳು ಹಾಗೂ ರಾಷ್ಟ್ರದ ರಕ್ಷಣೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಮತ್ತು ಇತರ ಅಧಿಕಾರಿಗಳ ಹೆಸರುಗಳಿರುವ ದಾಖಲೆಗಳ ಹೊರತಾಗಿ ಅವರು ಕೇಳಿದ ಎಲ್ಲ ದಾಖಲೆಗಳು ಮತ್ತು ಮಾಹಿತಿಯನ್ನು ಪುರೋಹಿತ್‌ರಿಗೆ ನೀಡಲಾಗುವುದುದೆಂದು ಪಾರಿಕ್ಕರ್ ಪತ್ರಕರ್ತರಿಗೆ ತಿಳಿಸಿದರು.
ಪುರೋಹಿತ್ ಹೇಳುತ್ತಿರುವಂತೆ ಅದು ಅವರ ಅಮಾಯಕತ್ವವನ್ನು ಸಾಬೀತು ಪಡಿಸಲು ನೆರವಾಗುತ್ತದೆ. ಅಂತಿಮ ನಿರ್ಧಾರ ನ್ಯಾಯಾಲಯದ್ದಾಗಿರುತ್ತದೆ ಎಂದವರು ಹೇಳಿದರು.
ರ್ಯಾಂಕ್‌ನ ಮೂಲಕ ತನ್ನ ಸ್ಥಾನಮಾನವನ್ನು ಮರಳಿ ನೀಡುವಂತೆ ಕೋರಿ ಪುರೋಹಿತ್, ಈ ತಿಂಗಳಾರಂಭದಲ್ಲಿ ಪಾರಿಕ್ಕರ್‌ಗೆ ಪತ್ರವೊಂದನ್ನು ಬರೆದಿದ್ದರು.
ಎ.4ರಂದು ಬರೆದ ಪತ್ರದಲ್ಲಿ ಅವರು, ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದ್ದು, ತಾನು 7 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸೆರೆ ಮನೆಯಲ್ಲಿದ್ದೇನೆ. ದೇಶ ಸೇವೆ ಮಾಡಿದುದಕ್ಕಾಗಿ ತನ್ನ ಗೌರವ, ಪ್ರತಿಷ್ಠೆ, ಸ್ಥಾನಮಾನಗಳನ್ನು ದೋಚಲಾಯಿತು ಹಾಗೂ ಶಿಕ್ಷೆಗೊಳಪಡಿಸಲಾಯಿತೆಂದು ಹೇಳಿದ್ದಾರೆ.





