ಚುಟುಕು ಸುದ್ದಿಗಳು
ನಾಳೆ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು, ಎ.21: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ‘ಶಾಲೆ ಕಡೆ ನನ್ನ ನಡೆ-ಶಿಕ್ಷಣ ನನ್ನ ಮೂಲಭೂತ ಹಕ್ಕು’ಎಂಬ ವಿನೂತನ ಆಂದೋಲನಕ್ಕೆ ಎ.23ರಂದು ನಗರದ ಪುರಭವನದಲ್ಲಿ ಚಾಲನೆ ದೊರೆಯಲಿದೆ. ಅಂದು ಸಂಜೆ 3:30ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ನಾಳೆ ವಿದ್ಯಾರ್ಥಿವೇತನ ವಿತರಣೆ
ಉಡುಪಿ, ಎ.21: ಉಡುಪಿ ಪೂರ್ಣಪ್ರಜ್ಞ್ಞಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಎ.23ರಂದು ಬೆಳಗ್ಗೆ 10:30ಕ್ಕೆ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಸೋಮಯಾಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿರುವರು. ಈ ಸಂದರ್ಭ 80 ಪ್ರತಿಭಾವಂತರಿಗೆ ನಾಲ್ಕು ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು. ಬಳಿಕ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟಿ, ಮುರಳಿ ಕಡೆಕಾರ್, ಮಂಜುನಾಥ್ ಕರಬ, ಜ್ಯೂನಿಯರ್ ಶಂಕರ್, ಬೈಕಾಡಿ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಎ.24: ನೀರುಮಾರ್ಗ ಗ್ರಾಮಸಭೆ
ಮಂಗಳೂರು, ಎ.21: ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನ್, ರಾಷ್ಟ್ರೀಯ ಸಾಮರಸ್ಯ ದಿವಸ್ ಮತ್ತು ರಾಷ್ಟ್ರೀಯ ಪಂಚಾಯತ್‌ರಾಜ್ ದಿವಸ್ ಆಚರಣೆಗಾಗಿ ಎ.24ರಂದು ಬೆಳಗ್ಗೆ 9ಕ್ಕೆ ನೀರುಮಾರ್ಗ ಭಜನಾ ಮಂದಿರದಲ್ಲಿ ನೀರುಮಾರ್ಗಮತ್ತು ಬೊಂಡಂತಿಲ ಗ್ರಾಮದ ಗ್ರಾಮಸಭೆ ನಡೆಸಲಾಗುವುದು ಎಂದು ಪ್ರಕಟನೆೆ ತಿಳಿಸಿದೆ.
ತುಳುಚಿತ್ರದ ಧ್ವನಿ ಸುರುಳಿ ಬಿಡುಗಡೆ
ಮಂಗಳೂರು, ಎ.21: ಶ್ರೀ ಸಾಯಿ ಎಂಟರ್‌ಪ್ರೈಸಸ್ ಅರ್ಪಿಸುವ ‘ದೋಸ್ತಿಲು ಕತ್ತಲೆ ಲೋಕದ ವಿಚಿತ್ರೊಲು’ ಎಂಬ ತುಳು ಚಿತ್ರದ ಧ್ವನಿಸುರುಳಿ ನಗರದ ಕಾವೂರು ಮುಲ್ಲಕಾಡುವಿನಲ್ಲಿ ಮುಲ್ಲಕಾಡು ಪ್ರೆಂಡ್ಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮದಲ್ಲಿ ಮಂದಾರಬೈಲು ಬ್ರಹ್ಮಶ್ರೀ ಹರಿಭಟ್, ಚಿತ್ರದ ಸಹನಿರ್ಮಾಪಕ ಜ್ಯೋತಿ ಜೈನ್, ಸಂಗೀತ ನಿರ್ದೇಶಕ ಹುಸೈನ್ ಕಾಟಿಪಳ್ಳ, ತುರವೇ ಗೌರವಾಧ್ಯಕ್ಷ ಯೋಗಿಶ್‌ಶೆಟ್ಟಿ ಜೆಪ್ಪು, ಚಿತ್ರದ ನಾಯಕ, ನಾಯಕಿಯರಾದ ವಿಘ್ನೇಶ್ ಕುಮಾರ್, ದೀಪಕ್, ಸಂತೋಷ್ ಕುಮಾರ್, ವಿದ್ಯಾಶ್ರೀ, ಚೈತ್ರಾ ಅಂಚನ್, ಪ್ರಿಯಾಂಕಾ ಉಪಸ್ಥಿತರಿದ್ದರು.
ಎಸ್‌ಇಬಿಯಿಂದ ಪ್ರತಿಭಾ ಕಾರಂಜಿ
ಮಂಗಳೂರು, ಎ.21: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಅಧೀನದ ಸಲಫಿ ಎಜುಕೇಶನ್ ಬೋರ್ಡ್ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಸಲಫಿ ಎಜುಕೇಶನ್ ಬೋರ್ಡ್ ಅಧೀನದಲ್ಲಿರುವ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
ಬಲ್ಮಠ ಶಾಂತಿ ನಿಲಯದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಆಯ್ಕೆಯಾದ ಮದ್ರಸ ವಿದ್ಯಾರ್ಥಿಗಳು ಇಸ್ಲಾಮಿ ಹಾಡು, ಭಾಷಣ, ಚರ್ಚೆ, ದುಆ ಇತ್ಯಾದಿ ಸ್ಪರ್ಧೆಗಳಲ್ಲಿ ಕಿಡ್ಸ್, ಜೂನಿಯರ್, ಸೀನಿಯರ್ ಮೂರು ವಿಭಾಗಗಳಾಗಿ ಭಾಗವಹಿಸಿದ್ದರು.
ಸಂಪೂರ್ಣವಾಗಿ ಕುರ್‌ಆನ್ ಕಂಠಪಾಠ ಮಾಡಿದ ನಂದಾವರ ಸಲಫಿ ಮದ್ರಸದ ವಿದ್ಯಾರ್ಥಿ ಹಾಫಿಝ್ ಮುಝಮ್ಮಿಲ್‌ರನ್ನು ಸನ್ಮಾನಿಸಲಾಯಿತು. ಮೌಲವಿ ಹದಿಯತುಲ್ಲಾಹ್ ಸಲಫಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಅಧ್ಯಕ್ಷ ಯು. ಅಬ್ದುಲ್ ರಝಾಕ್, ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ನಿಕಟ ಪೂರ್ವ ಅಧ್ಯಕ್ಷ ಅಹ್ಮದ್ ಅನ್ಸಾರ್, ಅಬೂಬಕರ್ ಪಾಂಡೇಶ್ವರ, ಬರಕಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಅಶ್ರಫ್ ಬಜ್ಪೆಭಾಗವಹಿಸಿದ್ದರು.
ಸಲಫಿ ಎಜುಕೇಶನ್ ಬೋರ್ಡ್ ಅಧ್ಯಕ್ಷ ಮೌಲವಿ ಮುಸ್ತಫಾ ದಾರಿಮಿ ಪ್ರಾಸ್ತಾ ವಿಕ ಭಾಷಣ ಮಾಡಿದರು. ಪ್ರಧಾನ ಕಾರ್ಯ ದರ್ಶಿ ಅಬೂ ಬಿಲಾಲ್ ಎಸ್.ಎಂ. ಸ್ವಾಗತಿಸಿದರು.
ಕರ್ನಾಟಕ ಸಲಫಿ ಮೂವ್‌ಮೆಂಟ್ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್ ಕಾರ್ಯಕ್ರಮ ಉದ್ಘಾಟಿಸಿದರು. ಮೂಸಾ ಫಾಝಿಲ್ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ಮುಲ್ಕಿ ವಂದಿಸಿದರು.
ನಾಳೆ ರಕ್ತೇಶ್ವರಿ ಸನ್ನಿಧಿ ವರ್ಧಂತಿ ಉತ್ಸವ
ಕೊಣಾಜೆ, ಎ.21: ನರಿಂಗಾನ ವಿದ್ಯಾನಗರದ ಶ್ರೀ ರಕ್ತೇಶ್ವರಿ ಅಮ್ಮನವರ ಸನ್ನಿಧಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದ್ವಿತೀಯ ವರ್ಧಂತಿ ಉತ್ಸವವು ಎ.23ರಂದು ಬೋಳಂತಕೋಡಿ ರಾಮಭಟ್ಟರ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಸ್ಪಶ್ಯತಾ ನಿರ್ಮೂಲನ ಅಭಿಯಾನ
ಮೂಡುಬಿದಿರೆ, ಎ.21: ‘ಕುಲ ಕುಲವೆಂದು ಹೊಡೆದಾಡದಿರಿ, ಎಲ್ಲರ ಕುಲವೂ ಒಂದೆ, ಅದು ಮನುಕುಲ’ ಎಂದು ಸಾರುತ್ತ ಅಸ್ಪಶ್ಯತಾ ನಿರ್ಮೂಲನ ಅಭಿಯಾನವು ದ.ಕ. ಜಿಲ್ಲಾ ಆಡಳಿತ, ಜಿಪಂ, ಮತ್ತು ಉಪ ನಿರ್ದೇಶಕರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ರಥ ಅಭಿಯಾನ ಹಾಗೂ ಗಿರೀಶ ನಾವಡ ಬಳಗ ಸುರತ್ಕಲ್ ಇವರಿಂದ ‘ಮನುಕುಲ ಒಂದೇ’ ಬೀದಿ ನಾಟಕ ಜರಗಿತು.
ಎ.26: ಕಡಮಜಲಿನಲ್ಲಿ ಗೇರು, ಕರಿಮೆಣಸು ಕೃಷಿ ಕಾರ್ಯಾಗಾರ
ಪುತ್ತೂರು, ಎ.21: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ಗೇರು ಮತ್ತು ಕರಿಮೆಣಸು ಕೃಷಿ ಮಾಹಿತಿ ಕಾರ್ಯಾಗಾರ ಎ.26ರಂದು ಕಡಮಜಲು ಸುಭಾಶ್ ರೈಯವರ ತೋಟದಲ್ಲಿ ನಡೆಯಲಿದೆ ಎಂದು ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಪ್ರಬಂಧಕ ಉದಯ್ ಹೆಗಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.







