ಪ್ರಜಾಸತ್ತೆಯ ದಮನಕ್ಕಾಗಿ ಮೋದಿ-ಶಾ ಕ್ಷಮೆ ಕೇಳಲಿ: ಕಾಂಗ್ರೆಸ್
ಉತ್ತರಾಖಂಡ ವಿವಾದ
ಹೊಸದಿಲ್ಲಿ, ಎ.21: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿದ ಹೈಕೋರ್ಟ್ ಆದೇಶದಿಂದ ಬೀಗಿರುವ ಕಾಂಗ್ರೆಸ್ ಇಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಜಾಪ್ರಭುತ್ವದ ದಮನ ಹಾಗೂ ಸಂವಿಧಾನದ ಕೊಲೆ ನಡೆಸಿದುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕ್ಷಮೆ ಯಾಚಿಸಬೇಕೆಂದು ಅದು ಆಗ್ರಹಿಸಿದೆ.
ಈ ತೀರ್ಪು, ಚುನಾಯಿತ ಸರಕಾರವೊಂದನ್ನು ಉರುಳಿಸಲು ಪ್ರಯತ್ನಿಸಿದ ಬಿಜೆಪಿಯ ಮುಖಕ್ಕೆ ತಪರಾಕಿಯಾಗಿದೆಯೆಂದು ಕಾಂಗ್ರೆಸ್ ಹೇಳಿದೆ.
ನ್ಯಾಯಾಲಯದ ಆದೇಶವನ್ನು ಉತ್ತರಾಖಂಡ ಜನತೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ನಿಯಮಾವಳಿ ವಿಜಯವೆಂದು ವ್ಯಾಖ್ಯಾನಿಸಿರುವ ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಈ ನಿರ್ಣಾಯಕ ತೀರ್ಪಿನಿಂದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಪಾಠ ಕಲಿಯಬೇಕು ಎಂದಿದ್ದಾರೆ.
ಕಾಂಗ್ರೆಸ್ ಸರಕಾರವನ್ನು ಬೀಳಿಸಬೇಕೆಂಬ ಕುರುಡು ದಾಹದಿಂದ ಪ್ರಜಾಪ್ರಭುತ್ವದ ದಮನ, ಸಂವಿಧಾನದ ಕೊಲೆ ಹಾಗೂ ಉತ್ತರಾಖಂಡ ಜನರ ಭಾವನೆಗಳನ್ನು ಸೋಲಿಸಿದುದಕ್ಕಾಗಿ ದೇಶದ ಹಾಗೂ ರಾಜ್ಯದ ಜನರ ಕ್ಷಮೆ ಯಾಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಗೆ ಈ ತೀರ್ಪು ಸಲಹೆ ನೀಡುವಂತಿದೆ. ತೀರ್ಪನ್ನು ತಾವು ಸ್ವಾಗತಿಸುತ್ತೇವೆಂದು ಅವರು ಹೇಳಿದ್ದಾರೆ.





