ಗುಜರಾತ್ ಗೆಲುವಿನ ಓಟಕ್ಕೆ ಹೈದರಾಬಾದ್ ಬ್ರೇಕ್

ವಾರ್ನರ್-ಧವನ್ ಭರ್ಜರಿ ಜೊತೆಯಾಟ
ರಾಜ್‌ಕೋಟ್, ಎ.21: ಆರಂಭಿಕ ದಾಂಡಿಗರಾದ ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿದ್ದ ಗುಜರಾತ್ ಲಯನ್ಸ್ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಮಣಿಸಿದೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್‌ನ 15ನೆ ಪಂದ್ಯದಲ್ಲಿ ಗೆಲುವಿಗೆ 136 ರನ್ ಸುಲಭ ಗುರಿ ಪಡೆದಿದ್ದ ಸನ್‌ರೈಸರ್ಸ್ ತಂಡ ನಾಯಕ ವಾರ್ನರ್(ಔಟಾಗದೆ 74 ರನ್, 48 ಎಸೆತ, 9 ಬೌಂಡರಿ) ಹಾಗೂ ಧವನ್(ಔಟಾಗದೆ 53 ರನ್, 41 ಎಸೆತ, 5 ಬೌಂಡರಿ) ಮೊದಲ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಸೇರಿಸಿದ 137 ರನ್ ಸಹಾಯದಿಂದ ಇನ್ನೂ 31 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಗುಜರಾತ್‌ನ ನಾಯಕ ರೈನಾ ಸನ್‌ರೈಸರ್ಸ್‌ನ ವಾರ್ನರ್-ಧವನ್ ಜೋಡಿಯನ್ನು ಬೇರ್ಪಡಿಸಲು ಆರು ಬೌಲರ್‌ಗಳನ್ನು ದಾಳಿಗಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಗುಜರಾತ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ ವಾರ್ನರ್ ಕೇವಲ 29 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ಅರ್ಧಶತಕ ಬಾರಿಸಿದ್ದಾರೆ.
ಗುಜರಾತ್ 135/8: ಇದಕ್ಕೆ ಮೊದಲು ನಾಯಕ ಸುರೇಶ್ ರೈನಾ(75 ರನ್, 51 ಎಸೆತ, 9 ಬೌಂಡರಿ) ಬಾರಿಸಿದ ಆಕರ್ಷಕ ಅರ್ಧಶತಕದ ಹೊರತಾಗಿಯೂ ಭುವನೇಶ್ವರ ಕುಮಾರ್ ಹಾಗೂ ಮುಸ್ತಫಿಝುರ್ರಹ್ಮಾನ್‌ರ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಗುಜರಾತ್ ಲಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 8 ವಿಕೆಟ್‌ಗಳ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಜಯಿಸಿದ ಹೈದರಾಬಾದ್ ತಂಡ ಗುಜರಾತ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತ್ತು.
ಗುಜರಾತ್ ಭುವನೇಶ್ವರ್ ಎಸೆದ ಮೊದಲ ಓವರ್‌ನ 4ನೆ ಎಸೆತದಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ದಾಂಡಿಗ ಆ್ಯರೊನ್ ಫಿಂಚ್(0) ವಿಕೆಟ್‌ನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. 2ನೆ ವಿಕೆಟ್‌ಗೆ 56 ರನ್ ಸೇರಿಸಿದ ಬ್ರೆಂಡನ್ ಮೆಕಲಮ್ ಹಾಗೂ ರೈನಾ ತಂಡಕ್ಕೆ ಆಸರೆಯಾದರು.
ಕುಮಾರ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ರೈನಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಪೂರೈಸಿದರು. ರೈನಾ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಮೆಕಲಮ್(18 ರನ್) ಔಟಾದ ತಕ್ಷಣ ಮತ್ತೊಮ್ಮೆ ಕುಸಿತದ ಹಾದಿ ಹಿಡಿದ ಹೈದರಾಬಾದ್ ದಿನೇಶ್ ಕಾರ್ತಿಕ್(8) ಹಾಗೂ ಡ್ವೇಯ್ನೆ ಬ್ರಾವೊ(8) ಅವರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು.
ಹೈದರಾಬಾದ್‌ನ ಪರ ಭುವನೇಶ್ವರ ಕುಮಾರ್(4-29) ಯಶಸ್ವಿ ಬೌಲರ್ ಎನಿಸಿಕೊಂಡರು. ರಹ್ಮಾನ್(1-19) ಮಿತವ್ಯಯಿ ಎನಿಸಿಕೊಂಡರು. ಸ್ರಾನ್, ದೀಪಕ್ ಹೂಡಾ ಹಾಗೂ ಬಿಪುಲ್ ಶರ್ಮ ತಲಾ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಗುಜರಾತ್ ಲಯನ್ಸ್: 20 ಓವರ್‌ಗಳಲ್ಲಿ 135/8
ಆ್ಯರೊನ್ ಫಿಂಚ್ ಬಿ ಕುಮಾರ್ 0
ಮೆಕಲಮ್ ಸಿ ಹೂಡಾ ಬಿ ಬಿಪುಲ್ ಶರ್ಮ 18
ಸುರೇಶ್ ರೈನಾ ಸಿ ಹೆನ್ರಿಕ್ಸ್ ಬಿ ಕುಮಾರ್ 75
ದಿನೇಶ್ ಕಾರ್ತಿಕ್ ಸಿ ಕುಮಾರ್ ಬಿ ಹೂಡಾ 8
ಡ್ವೇಯ್ನ ಬ್ರಾವೊ ಸಿ ಕುಮಾರ್ ಬಿ ಸ್ರಾನ್ 8
ರವೀಂದ್ರ ಜಡೇಜ ಬಿ ಮುಸ್ತಫಿಝುರ್ರಹ್ಮಾನ್ 14
ಅಕ್ಷದೀಪ್ ನಾಥ್ ಸಿ ಶರ್ಮ ಬಿ ಕುಮಾರ್ 5
ಡ್ವೇಯ್ನ ಸ್ಟೇಯ್ನ ಸಿ ಮಾರ್ಗನ್ ಬಿ ಕುಮಾರ್ 1
ಪ್ರವೀಣ್ ಕುಮಾರ್ ಔಟಾಗದೆ 1
ಇತರ 5
ವಿಕೆಟ್ ಪತನ: 1-0, 2-56, 3-74, 4-91, 5-117, 6-133, 7-133, 8-135
ಬೌಲಿಂಗ್ ವಿವರ
ಭುವನೇಶ್ವರ ಕುಮಾರ್ 4-0-29-4
ಸ್ರಾನ್ 4-0-36-1
ಮುಸ್ತಾಫಿಝುರ್ರಹ್ಮಾನ್ 4-0-19-1
ದೀಪಕ್ ಹೂಡಾ 3-0-22-1
ಹೆನ್ರಿಕ್ಸ್ 3-0-17-0
ಬಿಪುಲ್ ಶರ್ಮ 2-0-10-1
ಸನ್‌ರೈಸರ್ಸ್ ಹೈದರಾಬಾದ್: 14.5 ಓವರ್‌ಗಳಲ್ಲಿ 137/0
ಡೇವಿಡ್ ವಾರ್ನರ್ ಔಟಾಗದೆ 74
ಶಿಖರ್ ಧವನ್ ಔಟಾಗದೆ 53
ಇತರ 10
ಬೌಲಿಂಗ್ ವಿವರ:
ಡೇಲ್ ಸ್ಟೇಯ್ನ 2-0-17-0
ಪ್ರವೀಣ್ ಕುಮಾರ್ 2-0-31-0
ಡ್ವೇಯ್ನ ಬ್ರಾವೊ 3-0-26-0
ಸುರೇಶ್ ರೈನಾ 2-0-16-0
ತಾಂಬೆ 2-0-17-0
ಜಡೇಜ 2.5-0-20-0
ಧವಳ್ ಕುಲಕರ್ಣಿ 1-0-9-0







