ಇಂದು ಪುಣೆ-ಬೆಂಗಳೂರು ತಂಡದಿಂದ ಗೆಲುವಿಗಾಗಿ ಹೋರಾಟ

ಪುಣೆ, ಎ.21: ಒಂಬತ್ತನೆ ಆವೃತ್ತಿಯ ಐಪಿಎಲ್‌ನಲ್ಲಿ ಈ ತನಕ ಸಮಾನ ಪ್ರದರ್ಶನ ನೀಡಿರುವ ಪುಣೆ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ ಇಲ್ಲಿ ಮುಖಾಮುಖಿಯಾಗಲಿವೆ.
ತಲಾ 3 ಪಂದ್ಯಗಳನ್ನು ಆಡಿರುವ ಉಭಯ ತಂಡಗಳು 1ರಲ್ಲಿ ಜಯ, ಎರಡರಲ್ಲಿ ಸೋಲುಂಡಿವೆ. ತಲಾ 2 ಅಂಕವನ್ನು ಗಳಿಸಿವೆ. ಪುಣೆ ನೆಟ್ ರನ್‌ರೇಟ್‌ನಲ್ಲಿ ಬೆಂಗಳೂರಿಗಿಂತ ಮುಂದಿದೆ. ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಉಭಯ ತಂಡಗಳು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿವೆ. ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿರುವ ಈ ಎರಡು ತಂಡಗಳು ಆನಂತರ ಬೆನ್ನ್ನುಬೆನ್ನಿಗೆ ಸೋಲು ಅನುಭವಿಸಿವೆ.
ಎಂ.ಎಸ್. ಧೋನಿ ನಾಯಕತ್ವದ ಪುಣೆ ತಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತ್ತು. ಆ ನಂತರ ಗುಜರಾತ್ ಲಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್‌ನ ವಿರುದ್ಧ ಸೋತಿತ್ತು.
ಮತ್ತೊಂದೆಡೆ, ಸ್ಟಾರ್ ಆಟಗಾರರನ್ನು ಒಳಗೊಂಡ ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತ್ತು. ಆ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಶರಣಾಗಿತ್ತು.
ಪುಣೆ ತಂಡದಲ್ಲಿ ಸಮತೋಲನ ಕಾಪಾಡುವುದು ನಾಯಕ ಧೋನಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪುಣೆ ತಂಡದ ಬ್ಯಾಟಿಂಗ್ ಸರದಿಯಲ್ಲಿ ಅಜಿಂಕ್ಯ ರಹಾನೆ, ಕೇವಿನ್ ಪೀಟರ್ಸನ್, ಸ್ಟೀವನ್ ಸ್ಮಿತ್ ಹಾಗೂ ಧೋನಿ ಅವರಂತಹ ಆಟಗಾರರಿದ್ದಾರೆ. ಆದರೆ, ಎಫ್‌ಡು ಪ್ಲೆಸಿಸ್ ಹೊರತುಪಡಿಸಿ ಉಳಿದ ಆಟಗಾರರ ಕೂಟದಲ್ಲಿ ಈ ತನಕ ಉತ್ತಮ ಪ್ರದರ್ಶನ ನೀಡಿಲ್ಲ.
ಧೋನಿ ಕಳೆದ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಬದಲಿಗೆ ಶ್ರೀಲಂಕಾದ ತಿಸ್ಸಾರ ಪೆರೇರಾರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಪುಣೆ ತಂಡಕ್ಕೆ ಬ್ಯಾಟಿಂಗ್ ವಿಭಾಗಗಿಂತಲೂ ಬೌಲರ್‌ಗಳ ಅಸ್ಥಿರ ಪ್ರದರ್ಶನ ಚಿಂತೆಯಾಗಿ ಪರಿಣಮಿಸಿದೆ.
ವೇಗದ ಬೌಲರ್ ಇಶಾಂತ್ ಶರ್ಮರ ಬೌಲಿಂಗ್‌ನಲ್ಲಿ ಸ್ಥಿರತೆಯಿಲ್ಲ. ಧೋನಿಯ ಒಂದು ಕಾಲದ ನಂಬಿಗಸ್ಥ ಬೌಲರ್ ಆರ್‌ಪಿ ಸಿಂಗ್ ಪ್ರದರ್ಶನವೂ ಆಶಾದಾಯಕವಾಗಿಲ್ಲ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಳೆದ ಕೆಲವು ತಿಂಗಳಿಂದ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆದರೆ, ಅವರ ಸಹ ಆಟಗಾರ ಮುರುಗನ್ ಅಶ್ವಿನ್ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.
ಪುಣೆ ತಂಡದಂತೆಯೇ ಆರ್‌ಸಿಬಿಯ ಶಕ್ತಿ ಸಾಮರ್ಥ್ಯ ಬ್ಯಾಟಿಂಗ್ ವಿಭಾಗವನ್ನೇ ನೆಚ್ಚಿಸಿಕೊಂಡಿದೆ. ಸ್ಫೋಟಕ ದಾಂಡಿಗ ಕ್ರಿಸ್ ಗೇಲ್, ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಶೇನ್ ವ್ಯಾಟ್ಸನ್ ಹಾಗೂ ಮುಂಬೈ ಮೂಲದ ಯುವ ಆಟಗಾರ ಸರ್ಫರಾಝ್ ಖಾನ್ ಯಾವುದೇ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲರು.
ಆರ್‌ಸಿಬಿ ಸತತ ಎರಡನೆ ಪಂದ್ಯದಲ್ಲೂ ಗೇಲ್ ಸೇವೆಯಿಂದ ವಂಚಿತವಾಗುವ ಸಾಧ್ಯತೆಯಿದೆ. ಜಮೈಕಾದ ಬ್ಯಾಟ್ಸ್‌ಮನ್ ಗೇಲ್ ಮೊದಲ ಮಗುವಿಗೆ ತಂದೆಯಾಗಿರುವ ಕಾರಣ ಸ್ವದೇಶಕ್ಕೆ ವಾಪಸಾಗಿದ್ದಾರೆ. ಆರ್‌ಸಿಬಿಯ ಮುಖ್ಯವಾದ ಸಮಸ್ಯೆಯು ಬೌಲಿಂಗ್ ವಿಭಾಗದಲ್ಲಿದೆ. ವ್ಯಾಟ್ಸನ್ ಮಾತ್ರ ಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ.
ಮುಂಬೈನಲ್ಲಿ ಬುಧವಾರ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದ ಹೊರತಾಗಿಯೂ ಆರ್‌ಸಿಬಿ ಬೌಲರ್‌ಗಳು ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾಗಿದ್ದರು. ಮುಂಬೈ ಇನ್ನು 2 ಓವರ್‌ಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತ್ತು.
ಬುಧವಾರ ಆಡಮ್ ಮಿಲ್ನೆ ಹಾಗೂ ಡೇವಿಡ್ ವೈಸ್ ಬದಲಿಗೆ ಮೈದಾನಕ್ಕೆ ಇಳಿದಿದ್ದ ವರುಣ್ ಆ್ಯರೊನ್ ಹಾಗೂ ಕೇನ್ ರಿಚರ್ಡ್‌ಸನ್, ಯುವ ಬೌಲರ್ ಹರ್ಷಲ್ ಪಟೇಲ್ ರನ್‌ಗೆ ನಿಯಂತ್ರಣ ಹೇರಲು ವಿಫಲರಾಗಿದ್ದರು.
ಸ್ಪಿನ್ನರ್‌ಗಳಾದ ಯುಝ್ವೆಂದ್ರ ಚಾಹಲ್, ಪರ್ವೇಝ್ ರಸೂಲ್ ಹಾಗೂ ಇಕ್ಬಾಲ್ ಅಬ್ದುಲ್ಲಾ ದಾಳಿಯಲ್ಲಿ ಮೊನಚು ಕಳೆದುಕೊಂಡಿದೆ.
ಪಂದ್ಯದ ಸಮಯ: ರಾತ್ರಿ 8:00
ಐಪಿಎಲ್ 9ನೆ ಆವೃತ್ತಿಯ ಅಂಕಪಟ್ಟಿ
ತಂಡ ಪಂದ್ಯ ಗೆಲುವು ಸೋಲು ಅಂಕ
ಕೋಲ್ಕತಾ 04 03 01 06
ಗುಜರಾತ್ 04 03 01 06
ಡೆಲ್ಲಿ 03 02 01 04
ಹೈದರಾಬಾದ್ 04 02 02 04
ಮುಂಬೈ 05 02 03 04
ಪುಣೆ 03 01 02 02
ಬೆಂಗಳೂರು 03 01 02 02
ಪಂಜಾಬ್ 04 01 03 02







