ಉ.ಖಂಡ: ರಾಷ್ಟ್ರಪತಿ ಆಡಳಿತ ರದ್ದು: ಹೈಕೋರ್ಟ್ ಆದೇಶ
ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗ ಎ.29ರಂದು ಹೊಸದಾಗಿ ಬಲಾಬಲ ಪರೀಕ್ಷೆ

ಡೆಹ್ರಾಡೂನ್,ಎ.21: ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರಾ ಖಂಡದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಉತ್ತರಾಖಂಡ್ ಉಚ್ಚ ನ್ಯಾಯಾಲಯವು ಗುರುವಾರ ರದ್ದುಗೊಳಿಸಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಎ.29ರಂದು ಸದನದಲ್ಲಿ ಹೊಸದಾಗಿ ಬಲಾಬಲ ಪರೀಕ್ಷೆ ನಡೆಸುವಂತೆ ಅದು ಆದೇಶಿಸಿದೆ.
ರಾಷ್ಟ್ರಪತಿ ಆಡಳಿತ ಹೇರಿರುವುದನ್ನು ನಾವು ಒಪ್ಪುವುದಿಲ್ಲ ಎಂದು ಮುಖ್ಯ ನ್ಯಾಯಾಧೀಶ ಕೆ.ಎಂ.ಜೋಸೆಫ್ ನೇತೃತ್ವದ ವಿಭಾಗೀಯ ಪೀಠವು ಹೇಳಿತು.
ಪದಚ್ಯುತ ಮುಖ್ಯಮಂತ್ರಿ ಹರೀಶ ರಾವತ್ ಅವರು ಸಲ್ಲಿಸಿದ್ದ ಅರ್ಜಿಯ ಸತತ ಎರಡು ದಿನಗಳ ವಿಚಾರಣೆಯ ಬಳಿಕ ನ್ಯಾಯಾಲಯವು,ರಾಷ್ಟ್ರಪತಿ ಆಡಳಿತ ಘೋಷಣೆಯು ಅನೂರ್ಜಿತ ಮತ್ತು ಪರಿಣಾಮ ಶೂನ್ಯವಾಗಿದೆ ಎಂದು ಹೇಳಿತು.
ನ್ಯಾಯಾಲಯದ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ರಾವತ್,ಉಚ್ಚ ನ್ಯಾಯಾಲಯದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇದು ಉತ್ತರಾಖಂಡದ ಜನತೆಯ ಗೆಲುವಾಗಿದೆ. ಉತ್ತರಾಖಂಡದ ಜನರಿಗೆ ತಮ್ಮನ್ನು ತಾವೇ ಆಳುವ ಹಕ್ಕು ಇದೆ ಎಂದು ಹೇಳಿದರು.
ಆಡಳಿತ ಕಾಂಗ್ರೆಸ್‌ನಲ್ಲಿ ಬಂಡಾಯದ ಬಳಿಕ ‘ಸಂವಿಧಾನ ವ್ಯವಸ್ಥೆ ಕುಸಿದಿದೆ ’ ಎಂಬ ನೆಪವೊಡ್ಡಿ ಮಾ.27ರಂದು ರಾವತ್ ಸರಕಾರವನ್ನು ವಜಾಗೊಳಿಸಲಾಗಿತ್ತು. ಸದನದಲ್ಲಿ ಬಲಾಬಲ ಪರೀಕ್ಷೆಗೆ ನಿಗದಿಯಾಗಿದ್ದ ಒಂದು ದಿನ ಮೊದಲು ಕೇಂದ್ರವು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿತ್ತು.
ಉಚ್ಚ ನ್ಯಾಯಾಲಯದ ತೀರ್ಪು ನರೇಂದ್ರ ಮೋದಿ ಸರಕಾರಕ್ಕೆ ಭಾರೀ ಮುಜುಗರವನ್ನು ತಂದಿದೆ. ಅವರು ಚುನಾಯಿತ ಸರಕಾರಗಳೊಂದಿಗೆ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟಿಸಿದ್ದಾರೆ.
ಹೈಕೋರ್ಟ್ ಟೀಕೆಯ ವಿರುದ್ಧ ಸುಪ್ರೀಂಕೋರ್ಟ್‌ಗೆ ಸರಕಾರ
ಹೊಸದಿಲ್ಲಿ, ಎ.21: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯ ಸಂಬಂಧದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೇಳೆ ರಾಜ್ಯದ ಹೈಕೋರ್ಟ್ ಬುಧವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಬಗ್ಗೆ ಮಾಡಿದ್ದ ಟೀಕೆಯನ್ನು ಕಿತ್ತು ಹಾಕುವುದಕ್ಕಾಗಿ ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ಗೆ ಹೋಗುವ ನಿರೀಕ್ಷೆಯಿದೆ.
ರಾಷ್ಟ್ರಪತಿಯ ವಿರುದ್ಧ ಅಂತಹ ತೀಕ್ಷ್ಣ ಟೀಕೆಯನ್ನು ಸರಕಾರ ಒಪ್ಪುವು ದಿಲ್ಲ. ಅದನ್ನು ಕಿತ್ತು ಹಾಕುವಂತೆ ಕೋರಿ ಖಂಡಿತವಾಗಿಯೂ ಸುಪ್ರೀಂ ಕೋರ್ಟ್‌ಗೆ ಹೋಗಲಿದ್ದೇವೆಂದು ಅಜ್ಞಾತವಾಗುಳಿಯ ಬಯಸಿರುವ ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ ರಾಷ್ಟ್ರಪತಿಯ ವಿರುದ್ಧದ ಅಂತಹ ಟೀಕೆ ಯನ್ನು ವಿರೋಧಿಸದಿದ್ದಲ್ಲಿ ಅದೊಂದು ಪೂರ್ವ ನಿದರ್ಶನವಾಗಬಹುದೆಂದು ಅವರು ಅಭಿಪ್ರಾಯಿಸಿದ್ದಾರೆ.
ದೇಶದ ರಾಷ್ಟ್ರಪತಿ ತಪ್ಪು ಮಾಡದಿ ರುವಂತಹ ರಾಜನಲ್ಲವೆಂದು ಉತ್ತರಾಖಂಡ ಹೈಕೋರ್ಟ್‌ನ ಪೀಠವೊಂದು ಟೀಕಿಸಿತ್ತು. ಹೈಕೋರ್ಟ್‌ನ ಹೇಳಿಕೆಯ ಕುರಿತು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.
ರಾಷ್ಟ್ರಪತಿಯ ವಿರುದ್ಧ ಹೈಕೋರ್ಟ್ ಅಂತಹ ಭಾಷೆಯನ್ನು ಉಪ ಯೋಗಿಸಬಾರದಿತ್ತು. ಸ್ವಾತಂತ್ರಾನಂತರ ಯಾವುದೇ ಸಂಸ್ಥೆಯೂ ರಾಷ್ಟ್ರಪತಿಯ ವಿರುದ್ಧ ಈ ರೀತಿ ಅಭಿಪ್ರಾಯವನ್ನು ಎಂದೂ ವ್ಯಕ್ತಪಡಿಸಿ ಲ್ಲವೆಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿ ಯ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ನಮ್ಮ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಪತಿಯ ಹುದ್ದೆ ಸರ್ವೋನ್ನತ ವಾದುದು. ಅಂತಹ ಟೀಕೆಗಳು ದೇಶದಲ್ಲಿ ಅನಗತ್ಯ ಚರ್ಚೆಯನ್ನು ಪ್ರಚೋದಿಸುತ್ತವೆಂದು ಅವರು ಹೇಳಿದ್ದಾರೆ.
ಕೇಂದ್ರದ ವರ್ತನೆಯಿಂದ ನೋವಾಗಿದೆ: ಹೆಕೋರ್ಟ್
ನೈನಿತಾಲ್, ಎ.21: ಉತ್ತರಾಖಂಡದ ಮಹತ್ವದ ರಾಜಕೀಯ ಬಿಕ್ಕಟ್ಟಿನ ಕುರಿತು ವಿಚಾರಣೆ ನಡೆಸಿದ ರಾಜ್ಯದ ಹೈಕೋರ್ಟ್ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆ ಎತ್ತಿಕೊಂಡಿತು.
ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂದೆಗೆಯುವ ಕುರಿತು ತಾನು ಖಾತ್ರಿ ನೀಡಲಾರೆನೆಂದು ಸರಕಾರ ತಿಳಿಸಿದಾಗ, ಅದರ ವರ್ತನೆಯಿಂದ ತನಗೆ ನೋವಾಗಿದೆಯೆಂದು ಹೇಳಿದ ಹೈಕೋರ್ಟ್, ಸರಕಾರವು ಉತ್ತರಾಖಂಡವನ್ನು ತನ್ನ ಪ್ರತಿನಿಧಿ, ರಾಜ್ಯಪಾಲ ಕೆ.ಕೆ.ಪೌಲ್‌ರಿಂದ ಆಳಿಸಬೇಕೆಂದು ಸರಿಯಾಗಿ ನಿರ್ಣಯಿಸಿದೆಯೇ ಎಂದು ಪ್ರಶ್ನಿಸಿತು.
‘‘ನಾಳೆ ನೀವು ರಾಷ್ಟ್ರಪತಿ ಆಳ್ವಿಕೆಯನ್ನು ಹಿಂದೆಗೆದು, ಸರಕಾರ ರಚಿಸಲು ಯಾರನ್ನಾದರೂ ಆಹ್ವಾನಿಸಿದರೆ ಅದು ನ್ಯಾಯದ ಅಪಹಾಸ್ಯವಾಗುತ್ತದೆ’’ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ನ್ಯಾಯಾಲಯವು ಈ ವಾರದ ಆರಂಭದಲ್ಲಿ ನಡೆಸಿದ ವಿಚಾರಣೆಯ ವೇಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದ ಕೇಂದ್ರದ ಕ್ರಮ ಅವಸರದ್ದಾಗಿದೆ ಎಂದು ಟೀಕಿಸಿತ್ತು.







