ಕಾಸರಗೋಡು: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ಕಾಸರಗೋಡು, ಎ. 22: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವುದರೊಂದಿಗೆ ಕಾಸರಗೋಡಿನಲ್ಲಿ ಚುನಾವಣಾ ಪ್ರಚಾರಕ್ಕೆ ಕಾವು ಪಡೆದುಕೊಳ್ಳುತ್ತಿದೆ.
ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ಗೊಂಡಿದೆ. 29 ರ ತನಕ ನಾಮಪತ್ರ ಸಲ್ಲಿಸಬಹುದು. ಮೇ 2ರಂದು ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಮತದಾನ ಮೇ ೧೬ ರಂದು ನಡೆಯಲಿದ್ದು , ೧೯ ರಂದು ಮತ ಎಣಿಕೆ ನಡೆಯಲಿದೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ತ್ರಿಕೋಣ ಸ್ಪರ್ಧೆಗೆ ಸಜ್ಜಾಗುತ್ತಿದೆ. ಈಗಾಗಲೇ ಪ್ರಮುಖ ಪಕ್ಷಗಳು ಅಭ್ಯರ್ಥಿಗಳನ್ನು ಪ್ರಕಟಿಸಿದ್ದು , ಮೊದಲ ಹಂತದ ಪ್ರಚಾರ ಕಾರ್ಯ ಮುಗಿಸಿದೆ. ಇದಲ್ಲದೆ ಪಕ್ಷದ ಪ್ರಮುಖ ನಾಯಕರು ಜಿಲ್ಲೆಗಾಗಮಿಸಿ ಅಭ್ಯರ್ಥಿ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.
ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪ್ರತಿಪಕ್ಷ ನಾಯಕ ವಿ . ಎಸ್ ಅಚ್ಯುತಾನ೦ದನ್ ಈಗಾಗಲೇ ಮೊದಲ ಹಂತದ ಪ್ರಚಾರಕ್ಕೆ ಮೆರುಗು ನೀಡಿದ್ದಾರೆ. ಖಾತೆ ತೆರೆಯಬೇಕೆಂಬ ಹುಮ್ಮಸ್ಸಿನಲ್ಲಿರುವ ಬಿಜೆಪಿ ಚಿತ್ರನಟ ಸುರೇಶ್ ಗೋಪಿ ಮೂಲಕ ಕಾಸರಗೋಡಿನಿಂದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ತ್ರಿಕೋನ ಸ್ಪರ್ಧೆ ಮೂಲಕ ಪ್ರಬಲ ಪೈಪೋಟಿ ಕಂಡುಬರುತ್ತಿದೆ. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತ್ರತ್ವದ ಐಕ್ಯರಂಗ, ಸಿಪಿಎಂ ನೇತ್ರತ್ವದ ಎಡರಂಗ ಮತ್ತು ಬಿಜೆಪಿ ನಡುವೆ ಪ್ರಬಲ ಸ್ಪರ್ದೆಗೆ ವೇದಿಕೆಯಾಗುತ್ತಿದೆ. ಆದರೆ ಉದುಮ ಮತ್ತು ತ್ರಿಕ್ಕರಿಪುರದಲ್ಲಿ ಕಾಂಗ್ರೆಸ್ - ಸಿಪಿಎಂ ಹಾಗೂ ಕಾನ್ಚಾ೦ಗಾಡ್ ನಲ್ಲಿ ಕಾಂಗ್ರೆಸ್ - ಸಿಪಿಐ ನಡುವೆ ಪೈಪೋಟಿ ನಡೆಯುತ್ತಿದೆ.
ಮತದಾರರನ್ನು ಸೆಳೆಯಲು ರಾಜ್ಯ ಮಾತ್ರವಲ್ಲ ರಾಷ್ಟ್ರೀಯ ಮಟ್ಟದ ಮುಖಂಡರು ಜಿಲ್ಲೆಗೆ ತಲುಪುವರು.
ಪ್ರಧಾನಮಂತ್ರಿ ನರೇಂದ್ರ ಮೋದಿ , ಬಿಜೆಪಿ ಅಧ್ಯಕ್ಷ ಅಮಿತ್ ಷಾ , ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿಪಿಎಂ ಮುಖಂಡರಾದ ಸೀತಾರಾಂ ಯಚೂರಿ , ಪ್ರಕಾಶ್ ಕಾರಟ್ ಸೇರಿದಂತೆ ಪ್ರಮುಖ ಮುಖಂಡರು ಮುಂದಿನ ದಿನಗಳಲ್ಲಿ ಜಿಲ್ಲೆಗೆ ತಲಪುವರು. ಇದರೊಂದಿಗೆ ಚುನಾವಣಾ ಪ್ರಚಾರ ಮತ್ತಷ್ಟು ಬಿರುಸುಗೊಳ್ಳಲಿದೆ.







