ಎನ್ ಡಿ ಎ ಸರಕಾರ ಬಂದ ಮೇಲೆ ತಿರುಗಿ ಬೀಳುತ್ತಿರುವ ಕೇಸರಿ ಭಯೋತ್ಪಾದನೆಯ ಸಾಕ್ಷಿಗಳು

ಹೊಸದಿಲ್ಲಿ, ಎ. 22: ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೇಸರಿ ಭಯೋತ್ಪಾದನೆ ಪ್ರಕರಣ ವಿರುದ್ಧದ ಸಾಕ್ಷಿಗಳು ಒಬ್ಬೊಬ್ಬರಾಗಿ ತಮ್ಮ ಮೊದಲಿನ ಸಾಕ್ಷಿಗೆ ತದ್ವಿರುದ್ಧ ಹೇಳಿಕೆ ನೀಡತೊಡಗಿದ್ದಾರೆ. ಈ ಸಾಲಿಗೆ ಇದೀಗ ಸೇರ್ಪಡೆಯಾಗಿರುವವರು ದೆಹಲಿ ಮೂಲದ ವೈದ್ಯ ಡಾ.ಆರ್.ಪಿ.ಸಿಂಗ್.
"ಜಿಹಾದಿ ಉಗ್ರರ ದಾಳಿಗೆ ಪ್ರತಿದಾಳಿಯ ತಂತ್ರವನ್ನು ರೂಪಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದೆ" ಎಂದು ಈ ಮುನ್ನ ಮಹಾರಾಷ್ಟ್ರ ಎಟಿಸ್‌ಗೆ ಈ ಮೊದಲು ಹೇಳಿಕೆ ನೀಡಿದ್ದ ಸಿಂಗ್ ಇದೀಗ ವ್ಯತಿರಿಕ್ತ ಹೇಳಿಕೆ ನೀಡಿರುವುದು ಕೇಸರಿ ಭಯೋತ್ಪಾದಕರ ವಿರುದ್ಧದ ಪ್ರಕರಣ ತನಿಖೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ದೆಹಲಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಂತಃಸ್ರಾವತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಸಿಂಗ್ ಇದೀಗ, "ಅಭಿನವ ಭಾರತ್ ಹಾಗೂ ಅದರ ಪದಾಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ಮಹಾರಾಷ್ಟ್ರ ಎಟಿಎಸ್ ಚಿತ್ರಹಿಂಸೆ ನೀಡಿದ ಹಿನ್ನೆಲೆಯಲ್ಲಿ ಆ ಹೇಳಿಕೆ ನೀಡಿದ್ದೇನೆ" ಎಂದು ಹೊಸ ರಾಗ ತೆಗೆದಿದ್ದಾರೆ.
ಭೋಪಾಲ್, ನಾಶಿಕ್ ಹಾಗೂ ಫರೀದಾಬಾದ್‌ನಲ್ಲಿ ಸಭೆಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಹಾಗೂ ಸ್ವಾಮಿ ಅಸೀಮಾನಂದ, ಸೇನೆಯ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಮತ್ತಿತರರು ಮಸೀದಿಯ ಮೇಲೆ ದಾಳಿ ಸಂಘಟಿಸುವ ಬಗ್ಗೆ ಚರ್ಚಿಸಿದ್ದರು.
"ಬಾಂಬ್ ಕಾ ಬದ್ಲಾ ಬಾಂಬ್" ನೀತಿಯನ್ನು ಜಿಹಾದಿ ಉಗ್ರರ ವಿರುದ್ಧ ಅನುಸರಿಸಲು ಚರ್ಚಿಸಲಾಗಿತ್ತು ಎಂದು ಸಿಂಗ್ ಹೇಳಿದ್ದಾಗಿ ಎಟಿಎಸ್ ಹೇಳಿಕೊಂಡಿತ್ತು. ಇದೀಗ ಭಾರತೀಯ ಅಪರಾಧ ಸಂಹಿತೆಯ ಸೆಕ್ಷನ್ 164 ಅನ್ವಯ ಮ್ಯಾಜಿಸ್ಟ್ರೇಟರ ಮುಂದೆ ಸಿಂಗ್ ಹೊಸ ಹೇಳಿಕೆ ನೀಡಿದ್ದಾರೆ.
ಮಲೇಗಾಂವ್ ಸ್ಫೋಟ ಸಂಬಂಧ ನಡೆಯುತ್ತಿರುವ ತನಿಖೆಯಲ್ಲಿ ಮತ್ತೊಬ್ಬ ಪ್ರಮುಖ ಸಾಕ್ಷಿ ಯಶಪಾಲ್ ಭದಾನಾ ಕೂಡಾ ಇದೇ ರೀತಿ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಎರಡು ಹೇಳಿಕೆಗಳು ತನಿಖೆ ದಿಕ್ಕನ್ನೇ ಬದಲಾಯಿಸಲಿವೆ ಎಂದು ಹೇಳಲಾಗುತ್ತಿದೆ. ಇದೀಗ ಇಬ್ಬರು ಪ್ರಮುಖ ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆಗಳು ಸಿಬಿಐ ಆರೋಪಪಟ್ಟಿಯ ಅಂಶಗಳಿಗೆ ತದ್ವಿರುದ್ಧವಾಗಿವೆ. ಈ ಚಾಳಿ ಇತರ ಹಲವು ಪ್ರಕರಣಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.







