ಬೈಬಲ್ ಪ್ರಶ್ನೋತ್ತರದಲ್ಲಿ ವಿಫಲ ಬಾಲಕನಿಗೆ ಮನಸೋ ಇಚ್ಛೆ ಥಳಿಸಿದ ಪಾದ್ರಿ, ನಾಪತ್ತೆ

ಮಂಗಳೂರು, ಎ. 22: ಕ್ರಿಶ್ಚಿಯನ್ ಸಂಪ್ರದಾಯವಾದ ಕಮ್ಯುನಿಯನ್ ಕೆಟ್ಯಾಚಿಸಂ ವೇಳೆ ಬೈಬಲ್ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಲು ವಿಫಲನಾದ ಬಾಲಕನಿಗೆ ಮನಸೋ ಇಚ್ಛೆ ಥಳಿಸಿದ ಇಲ್ಲಿನ ಲೇಡಿ ಫಾತಿಮಾ ಚರ್ಚ್‌ನ ಪಾದ್ರಿ ಇದೀಗ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಏಪ್ರಿಲ್ 12ರಂದು ನಡೆದಿದ್ದು, ಏಪ್ರಿಲ್ 18ರಂದು ಪ್ರಕರಣ ದಾಖಲಾಗಿದೆ. 12 ವರ್ಷದ ಬಾಲಕನ ಪೋಷಕರು ಈ ಕ್ಯಾಥೊಲಿಕ್ ಚರ್ಚ್‌ನ ಪಾದ್ರಿ ಆಂಡ್ರ್ಯೂ ಡಿಕೋಸ್ಟಾ ವಿರುದ್ಧ ದೂರು ನೀಡಿದ್ದಾರೆ.
ತೀರಾ ಬಡಕುಟುಂಬದ ಈ ಬಾಲಕ ಘಟನೆಯನ್ನು ತಂದೆ ತಾಯಿಗೆ ವಿವರಿಸಿದ ಬಳಿಕ, ಪೋಷಕರು ಬಾಲನ್ಯಾಯ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
"ಆರೋಪಿ ಪಾದ್ರಿ ಬಾಲಕನಿಗೆ ಬೈದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಹೊಡಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ" ಎಂದು ಮಂಗಳೂರು ಡಯಾಸಿಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರೆವರೆಂಡ್ ಫಾದರ್ ವಿಲಿಯಂ ಮಿನೇಜಸ್ ಪ್ರಕಟಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾದ ಪಾದ್ರಿ ಪೊಲೀಸರ ಜತೆ ತನಿಖೆಗೆ ಸಹಕರಿಸುವಂತೆ ಹಾಗೂ ಬಾಲಕನ ಕುಟುಂದವರನ್ನು ಭೇಟಿ ಮಾಡುವಂತೆ ಮಂಗಳೂರಿನ ಬಿಷಪ್ ಅಲೋಶಿಯಸ್ ಪಾಲ್ ಡಿಸೋಜ ಸೂಚಿಸಿದ್ದಾರೆ.





