ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಚಿಕ್ಕಬಳ್ಳಾಪುರ, ಎ. 22: ಜಿಲ್ಲಾಧಿಕಾರಿ ಕಚೇರಿಯೆದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನೋರ್ವ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಚಿಕ್ಕಬಳ್ಳಾಪುರದ ಅಂಗರೇಖನಹಳ್ಳಿಯ ನಿವಾಸಿ ಆನಂದ ಕುಮಾರ್ ಮೃತ ರೈತ.
ರೈತ ಆನಂದ್ ಕುಮಾರ್ ಹಲವು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದರು. ಆದರೆ ಅವರಿಗೆ ಜಮೀನು ಮಂಜೂರು ಮಾಡದೆ ಭೂಮಿ ತೆರವು ಮಾಡುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಗೇರು ಬೆಳೆ ಬೆಳೆದಿದ್ದ ರೈತ ಆನಂದ್‌ಕುಮಾರ್‌ರ ಫಸಲನ್ನು ಹರಾಜು ಹಾಕಲು ಗ್ರಾಮ ಪಂಚಾಯತ್ ನೋಟಿಸ್ ಜಾರಿ ಮಾಡಿತ್ತು ಎನ್ನಲಾಗಿದೆ. ಇದರಿಂದ ಕೆರಳಿದ ರೈತ ಸಂಘಟನೆಗಳು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯೆದುರು ಎ. 20ರಂದು ಪ್ರತಿಭಟನೆ ನಡೆಸಿದ್ದವು. ಈ ವೇಳೆ ರೈತ ಆನಂದ್ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ತೀವ್ರ ಅಸ್ವಸ್ಥಗೊಂಡ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ರೈತ ಆನಂದ್ ಕುಮಾರ್ ಸಾವಿನ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಚಿಕ್ಕಬಳ್ಳಾಪುರ ಬಂದ್‌ಗೆ ಕರೆ ನೀಡಿವೆ.
ಪರಿಹಾರಕ್ಕೆ ಒತ್ತಾಯ: ಘಟನೆಯನ್ನು ಖಂಡಿಸಿ ವಿಕ್ಟೋರಿಯಾ ಆಸ್ಪತ್ರೆಯೆದುರು ಪ್ರತಿಭಟನೆ ನಡೆಸಿದ ರೈತರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಮೃತಪಟ್ಟ ರೈತ ಆನಂದ್‌ಕುಮಾರ್ ಕುಟುಂಬಕ್ಕೆ ಸರಕಾರ 10 ಲಕ್ಷ ರೂ. ಪರಿಹಾರ ನೀಡಬೇಕು. ಆತನ ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.





