ಮೈಲೇಜ್ ಹೆಚ್ಚು ತೋರಿಸುವ ವಂಚನೆಯ ಆರೋಪ : ತನಿಖೆ
ಫ಼ೊಕ್ಸ್ ವ್ಯಾಗನ್ ಬಳಿಕ ಮಿಟ್ಸುಬಿಷಿ ಸರದಿ

ಟೋಕಿಯೊ, ಎ. 22 : ಜಪಾನಿನ ಆರನೇ ಅತಿ ದೊಡ್ಡ ಆಟೊ ಮೊಬೈಲ್ ಉತ್ಪಾದಕ ಮಿಟ್ಸುಬಿಷಿ ಮೋಟಾರ್ಸ್ ಕಾರ್ಪ್ ತಾನು ಜಪಾನಿನಲ್ಲಿ ಮಾರಾಟ ಮಾಡಿದ 6,25,000 ಕಾರುಗಳಿಗೆ ಮೈಲೇಜ್ ಹೆಚ್ಚು ತೋರಿಸಿರುವುದಾಗಿ ಹೇಳಿದ ಬಳಿಕ ಕಂಪೆನಿಯ ಷೇರು ಮೌಲ್ಯ ಬುಧವಾರದಿಂದ ಕುಸಿಯಲಾರಂಭಿಸಿದೆ.
ಗುರುವಾರ ಸಂಜೆಯೊಳಗಾಗಿ ಕಂಪೆನಿಯ ಷೇರು ಮೌಲ್ಯ 20%ದಷ್ಟು ಕುಸಿದಿದೆ. ಕಂಪೆನಿ ಈ ವಿಚಾರದಲ್ಲಿ ಕ್ಷಮೆ ಯಾಚಿಸಿದ್ದು ವಾಹನಗಳು ಹೆಚ್ಚು ಮೈಲೇಜ್ ನೀಡುವುದರಿಂದ 5%ದಿಂದ 10%ತನಕ ಇಂಧನ ಉಳಿತಾಯವಾಗುವುದೆಂದು ತಾನು ತಪ್ಪಾಗಿ ಹೇಳಿಕೊಂಡಿದ್ದೇನೆಂದು ಒಪ್ಪಿಕೊಂಡಿತ್ತು.
ಅಮೇರಿಕಾದ ವಾಹನ ಸುರಕ್ಷತಾ ನಿಯಂತ್ರಕರು ತಮ್ಮ ದೇಶದಲ್ಲಿ ಮಿಟ್ಸುಬಿಷಿ ಕಂಪೆನಿ ಮಾರಾಟ ಮಾಡಿದ ವಾಹನಗಳ ಬಗ್ಗೆ ಮಾಹಿತಿ ಕೇಳಿದಂದಿನಿಂದ ಕಂಪೆನಿಯ ಷೇರು ಬೆಲೆ 13.2%ರಷ್ಟು ದಾಖಲೆ ಮಟ್ಟದಲ್ಲಿ ಕಡಿಮೆಯಾಗಿದೆ. ಅತ್ತ ಜಪಾನಿ ಮಾಧ್ಯಮ ವರದಿಗಳ ಪ್ರಕಾರ ಕಂಪೆನಿ ಈ ವಂಚನೆ ಯಾವ್ಯಾವ ಮಾಡೆಲ್ ವಾಹನಗಳ ವಿಚಾರದಲ್ಲಿ ನಡೆದಿದೆಯೆಂಬುದರ ಮಾಹಿತಿ ನೀಡುವ ಸಾಧ್ಯತೆಗಳು ಕಡಿಮೆ.
ಕಂಪೆನಿ ತಯಾರಿಸಿದ 6.2 ಲಕ್ಷಕ್ಕೂ ಹೆಚ್ಚು ವಾಹನಗಳ ಮೈಲೇಜನ್ನು ಉದ್ಯೋಗಿಗಳು ಹೆಚ್ಚು ತೋರಿಸಿದ್ದಾರೆಂದು ತನಗೆ ತಿಳಿದು ಬಂದಿದೆಯೆಂದು ಕಂಪೆನಿ ಹೇಳಿದಂದಿನಿಂದ ಈ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ.
ಮೂಲಸೌಕರ್ಯ, ಸಾರಿಗೆ ಹಾಗೂ ಪ್ರವಾಸೋದ್ಯಮ ಸಚಿವಾಲಯಗಳ ತನಿಖಾಕಾರರು ಮಧ್ಯ ಜಪಾನಿನ ನಗೋಯಾದಲ್ಲಿರುವ ಕಂಪೆನಿಯಕಚೇರಿಗಳು ಹಾಗೂ ಅಸೆಂಬ್ಲಿ ಸ್ಥಾವರಗಳಿಗೆ ಭೇಟಿ ನೀಡುತ್ತಿರುವ ಚಿತ್ರಗಳು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಮಿಟ್ಸುಬಿಷಿಯ ಮೈಲೇಜ್ ವಿಚಾರದ ವಿವಾದದಿಂದ ಕಂಪೆನಿಯ ಸ್ವಂತ 1.57 ಲಕ್ಷ ಇಕೆ ವ್ಯಾಗನ್ ಹಾಗೂ ಇಕೆ ಸ್ಪೇಸ್ ಲೈಟ್ ಪ್ಯಾಸೆಂಜರ್ ಕಾರುಗಳು ಹಾಗೂ ನಿಸ್ಸಾನ್ ಮೋಟಾರ್ಸ್ ಗೆ ತಯಾರಿಸಿ ಕೊಡಲಾದ 4.68 ಲಕ್ಷ ಡೇಯ್ಝ ಹಾಗೂ ರೂಕ್ಸ್ ವಾಹನಗಳು ಬಾಧಿತವಾಗಿವೆ ಸೇರಿವೆ.







