ಸುಬ್ರಹ್ಮಣ್ಯನ್ ಸ್ವಾಮಿ, ಸುರೇಶ್ ಗೋಪಿ ಸಹಿತ 6 ಮಂದಿ ರಾಜ್ಯಸಭೆಗೆ

ನವದೆಹಲಿ, ಎ. 22: ಹಿರಿಯ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ, ಮಾಜಿ ಪತ್ರಕರ್ತ ಹಾಗೂ ಬಿಜೆಪಿ ಬೆಂಬಲಿಗ ಸ್ವಪನ್ ದಾಸ್ ಗುಪ್ತಾ, ಮಲಯಾಳಂ ನಟ ಹಾಗೂ ಕೇರಳದಲ್ಲಿ ಬಿಜೆಪಿಯ ತಾರಾ ಪ್ರಚಾರಕ ಸುರೇಶ್ ಗೋಪಿ, ಆರ್ಥಿಕ ತಜ್ಞ ಹಾಗೂ ರಾಷ್ಟ್ರೀಯ ಸಲಹಾ ಸಮಿತಿಯ ಮಾಜಿ ಸದಸ್ಯ ನರೇಂದ್ರ ಜಾಧವ್ ಹಾಗೂ ಬಾಕ್ಸರ್ ಮೇರಿ ಕೋಂ ಅವರನ್ನು ರಾಜ್ಯಸಭೆಗೆ ನೇಮಿಸಲು ಕೇಂದ್ರ ಸರಕಾರ ನಿರ್ಧರಿಸಿದೆಯೆಂದು ಸರಕಾರಿ ಹಾಗೂ ಬಿಜೆಪಿ ಮೂಲಗಳು ತಿಳಿಸಿವೆ. ನಾಮನಿರ್ದೇಶಿತ ಸದಸ್ಯರ ಒಟ್ಟು ಏಳು ಖಾಲಿ ಸ್ಥಾನಗಳಲ್ಲಿ ಆರು ಸ್ಥಾನಗಳಿಗೆ ಸದಸ್ಯರನ್ನು ನೇಮಿಸಲಾಗುವುದು ಎಂದು ತಿಳಿದು ಬಂದಿದೆ.
ಹೆಚ್ಚಿನ ಹೆಸರುಗಳು ಬಿಜೆಪಿಯ ಸಮೀಪ ವರ್ತಿಗಳದ್ದಾಗಿದ್ದು, ಕೆಲವೊಂದು ಮೂಲಗಳ ಪ್ರಕಾರ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿದ್ದು ಅವರನ್ನು ಕೂಡ ರಾಜ್ಯಸಭೆಗೆ ನೇಮಿಸಲಾಗುವುದು. ಆದರೆ ಏಳನೇ ಸದಸ್ಯನ ಆಯ್ಕೆ ವಿಚಾರದಲ್ಲಿ ನಟ ಅನುಪಮ್ ಖೇರ್ ಹಾಗೂ ಪತ್ರಕರ್ತ ರಜತ್ ಶರ್ಮರ ನಡುವೆ ಯಾರನ್ನು ನೇಮಿಸುವುದು ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆಯೆನ್ನಲಾಗಿದೆ.
ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಕೇಂದ್ರದ ನಿರ್ಧಾರವನ್ನು ಹೈಕೋರ್ಟ್ ಬದಿಗಿರಿಸಿದ ಮರುದಿನವೇ ರಾಜ್ಯಸಭೆಗೆ ನಾಮ ನಿರ್ದೇಶಿತ ಸದಸ್ಯರ ಹೆಸರುಗಳು ಕೇಳಿ ಬಂದಿವೆ. ಸಾಹಿತ್ಯ, ಕ್ರೀಡೆ, ಕಲೆ, ಸಮಾಜ ಸೇವೆ, ಕ್ರೀಡೆ, ವಿಜ್ಞಾನ ಮೊದಲಾದ ಕ್ಷೇತ್ರಗಳ ಸಾಧಕರನ್ನು ಸರಕಾರದ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ.
ಈಗ ನಾಮನಿರ್ದೇಶನಗೊಳ್ಳುವವರಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ದೂರುದಾರರಲ್ಲೊಬ್ಬರಾಗಿದ್ದು ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಟೀಕಾಕಾರರೂ ಆಗಿದ್ದಾರೆ. ಸಿದ್ದು ಅವರು ಎಎಪಿ ಸೇರಿ ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದೆಂಬ ಭಯವಿರುವ ಹಿನ್ನೆಲೆಯಲ್ಲಿ ಬಿಜೆಪಿ ಅವರಿಗೆ ರಾಜ್ಯ ಸಭಾ ಸ್ಥಾನ ನೀಡುವ ಸಾಧ್ಯತೆಯಿದೆ. ಮೂರು ಬಾರಿ ಅಮೃತ್ ಸರದಿಂದ ಸಂಸದರಾಗಿ ಆಯ್ಕೆಯಾಗಿರುವ ಸಿದ್ದು ಕಳೆದ ಬಾರಿ ಅರುಣ್ ಜೇಟ್ಲಿಯವರಿಗಾಗಿ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದರು. ಪೂರ್ವಾಂಚಲ ರಾಜ್ಯಗಳ ಪ್ರತಿನಿಧಿಯಾಗಿ ಬಾಕ್ಸರ್ ಮೇರಿ ಕೋಂ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ.
ಮಾರ್ಚ್ 21ರಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್, ಗೀತೆ ರಚನೆಕಾರ ಜಾವೇದ್ ಅಖ್ತರ್, ರಂಗಭೂಮಿ ಕಲಾವಿದೆ ಬಿ ಜಯಶ್ರೀ, ಶಿಕ್ಷಣತಜ್ಞ ಮೃಣಾಲ್ ಮಿರಿ ಹಾಗೂ ಆರ್ಥಿಕ ತಜ್ಞ ಭಾಲ್ ಚಂದ್ರ ಮುಂಗೇಕರ್ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತರಾಗಿದ್ದರು. ಕಳೆದ ವರ್ಷ ಕೈಗಾರಿಕಾ ತಜ್ಞ ಅಶೋಕ್ ಗಾಂಗೂಲಿ ಹಾಗೂ ಪತ್ರಕರ್ತ ಎಚ್ ಕೆ ದುವಾ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು.







