ಹಲ್ಲೆ ಪ್ರಕರಣದಲ್ಲಿ ಬಿಜೆಪಿ ಸಂಸದನ ಅಪರಾಧ ಸಾಬೀತು
ತೀರ್ಪು ಅಮಾನತಿಗೆ ಗುಜರಾತ್ ಹೈ ಕೋರ್ಟ್ ನಕಾರ

ಅಹ್ಮದಾಬಾದ್, ಎ. 22 : ಹಲ್ಲೆ ಪ್ರಕರಣವೊಂದರಲ್ಲಿ ದೋಷಿಯೆಂದು ಪರಿಗಣಿತರಾಗಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಸಂಸದ ನರನ್ ಭಾಯಿ ಭಿಖಾಭಾಯಿ ಕಚ್ಚಡಿಯಾ ಸಂಸತ್ ಸದಸ್ಯ ಸ್ಥಾನವನ್ನು ಕಳೆದುಕೊಳ್ಳುತ್ತಾರೆಂಬ ಒಂದೇ ಒಂದು ಕಾರಣಕ್ಕೆ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸಲು ಸಾಧ್ಯವಿಲ್ಲವೆಂದು ಗುಜರಾತ್ ಹೈಕೋರ್ಟ್ ಹೇಳಿದೆ.
ಆದರೆ ಹೈಕೋರ್ಟ್ ಕಚ್ಚಡಿಯಾರಿಗೆ ನೀಡಲಾದ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದ್ದು ಅವರನ್ನು ಜಾಮೀನಿನ ಮೇಲೆ ರೂ 10,000 ವೈಯಕ್ತಿಕ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲುಆದೇಶಿಸಿದೆ.
ಡಾ. ಭೀಮ್ ಜಿ ಭಾಯಿ ಧಾಭಿ ಎಂಬವರ ಮೇಲೆ ಅಮ್ರೇಲಿ ಸಿವಿಲ್ ಆಸ್ಪತ್ರೆಯಲ್ಲಿ ಕಚ್ಚಡಿಯಾ ಜನವರಿ 1, 2013ರಂದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರೊಬ್ಬರ ಸಂಬಂಧಿಗೆ ಚಿಕಿತ್ಸೆ ನೀಡಲು ಅವರು ನಿರಾಕರಿಸಿದ್ದರೆನ್ನಲಾಗಿದ್ದು ಅದಕ್ಕಾಗಿ ಅವರ ಮೇಲೆ ಹಲ್ಲೆಗೈಯಲ್ಲಾಗಿತ್ತೆಂದು ಹೇಳಲಾಗಿತ್ತು. ಕಳೆದ ವಾರ ಈ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯದಲ್ಲಿ ಕಚ್ಚಡಿಯಾರ ಅಪರಾಧ ಕಳೆದ ವಾರ ಸಾಬಿತಾಗಿತ್ತು.
ಅಪರಾಧ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿತರಾದ ಸಂಸತ್ ಸದಸ್ಯರು ಹಾಗೂ ಶಾಸಕರು ತಮ್ಮ ಸದಸ್ಯತ್ವದಿಂದ ಕೂಡಲೇ ಅನರ್ಹರಾಗುತ್ತಾರೆಂದು ಹಾಗೂ ಅವರಿಗೆ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗುವುದಿಲ್ಲವೆಂದು ಲಿಲ್ಲಿ ಥಾಮಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.







