ಸೌದಿಯಲ್ಲಿ ವಲಸಿಗರಿಗೆ ಗ್ರೀನ್ ಕಾರ್ಡ್ ಸೌಲಭ್ಯ : ಸೋಮವಾರ ವಿವರ ಬಹಿರಂಗ

ಜಿದ್ದಾ, ಎ. 22: ವಲಸಿಗರಿಗೆ ಕೊಡುವುದಾಗಿ ಇತ್ತೀಚೆಗೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ್ದ ‘‘ಗ್ರೀನ್ ಕಾರ್ಡ್’’ನ ವಿವರಗಳಿಗಾಗಿ ತನ್ನ ಸಚಿವಾಲಯ ಕಾಯುತ್ತಿದೆ ಎಂದು ಸೌದಿ ಅರೇಬಿಯದ ಕಾರ್ಮಿಕ ಸಚಿವ ಮುಫ್ರೇಝ್ ಅಲ್-ಹಕಬಾನಿ ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಸೌದೀಕರಣದ ಬಗ್ಗೆ ಮಾತನಾಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಲ್-ಹಕಬಾನಿ ಮಾತನಾಡುತ್ತಿದ್ದರು.
ದೇಶದಲ್ಲಿರುವ ಸುಮಾರು 1.1 ಕೋಟಿ ವಲಸಿಗರ ವಾಸ್ತವ್ಯ ವ್ಯವಸ್ಥೆಯ ಬಗ್ಗೆ ಸೋಮವಾರ ಪ್ರಕಟನೆಯೊಂದು ಹೊರಬೀಳಲಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ತೈಲ ಬೆಲೆಯಲ್ಲಿನ ಕುಸಿತದ ಹಿನ್ನೆಲೆಯಲ್ಲಿ ಸೌದಿ ಅರೇಬಿಯದ ಆರ್ಥಿಕತೆಯನ್ನು ವೈವಿಧ್ಯಮಯಗೊಳಿಸಲು ದೇಶ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಈ ತಿಂಗಳ ಆದಿ ಭಾಗದಲ್ಲಿ ವಿದೇಶಿ ಟಿವಿ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯುವರಾಜ ಮುಹಮ್ಮದ್ ಹೇಳಿದ್ದರು. ಅದೇ ಸಂದರ್ಶನದಲ್ಲಿ ಅವರು ‘‘ಗ್ರೀನ್ ಕಾರ್ಡ್’’ ಬಗ್ಗೆ ಪ್ರಸ್ತಾಪಿಸಿದ್ದರು.
ದೂರಸಂಪರ್ಕ ಕ್ಷೇತ್ರವನ್ನು ಸೌದೀಕರಣಗೊಳಿಸುವ ತನ್ನ ನೀತಿಯನ್ನು ಸರಕಾರ ಮುಂದುವರಿಸುವುದಾಗಿ ಅಲ್-ಹಕಬಾನಿ ಸ್ಪಷ್ಟಪಡಿಸಿದರು. ವಲಸಿಗರು ಒಂದೋ ತಮ್ಮ ಕೆಲಸಗಳನ್ನು ಬದಲಾಯಿಸಿ ದೇಶದಲ್ಲೇ ಉಳಿಯಬಹುದು ಅಥವಾ ದೇಶವನ್ನು ತೊರೆಯಬಹುದು ಎಂದರು.
ಸೌದೀಕರಣ ನೀತಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಕಾರದ ಇತರ ಇಲಾಖೆಗಳನ್ನೂ ಬಳಸಿಕೊಳ್ಳುತ್ತಿರುವುದಾಗಿ ಮುಫ್ರೇಝ್ ತಿಳಿಸಿದರು.







