ಪುತ್ತೂರು: ಎ.24 ರಂದು ಪುತ್ತೂರಿಗೆ ಶೃಂಗೇರಿ ಜಗದ್ಗುರು
ಪುತ್ತೂರು: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರಾದ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳರವರು ಎ.24ರಂದು ಪುತ್ತೂರಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಂದನಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪುರಂದರ ಭಟ್ ಬಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಾಲಘಟ್ಟದಲ್ಲಿ ಶೃಂಗೇರಿ ಶ್ರೀಗಳು ನಮ್ಮ ನಡುವೆ ಇರುವುದು ನಮ್ಮ ಭಾಗ್ಯ ಎಂದು ಹೇಳಿದ ಪುರಂದರ ಭಟ್‌ರವರು ಧಾರ್ಮಿಕ ನೈತಿಕ ಕ್ರಾಂತಿ ಉಂಟು ಮಾಡುವ ಯತಿವರ್ಯರಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತು ಅವರ ಶಿಷ್ಯ ತತ್ಕಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಗುರುವಂದನೆ ಸ್ವೀಕರಿಸಲಿದ್ದಾರೆ. ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಶ್ರೀಗಳಿಗೆ ಗುರುವಂದನೆ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಕೋಟೆಕಾರು ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಯ ನಾಯಕರುಗಳು ಗುರುಗಳಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಂದನಾ ಕಾರ್ಯಕ್ರಮ ಸಮಿತಿ ಗೌರವ ಸಲಹೆಗಾರ ಸುರೇಶ್ ಶೆಟ್ಟಿ ಕೆ, ಸಹ ಕಾರ್ಯದರ್ಶಿ ಶಿವರಾಂ ಆಳ್ವ ಉಪಸ್ಥಿತರಿದ್ದರು.





