ಸಿನೆಮಾ ಕ್ಷೇತ್ರವನ್ನು ಕಲೆಯಾಗಿ ಪರಿಗಣಿಸಲಾಗಿಲ್ಲ: ಲಿಂಗದೇವರು ಬೇಸರ

ಮಂಗಳೂರು, 22: ನಮ್ಮ ದೇಶದಲ್ಲಿ 10,000 ಕೋಟಿರೂ.ಗಳ ವ್ಯವಹಾರ ಮಾಡುತ್ತಿರುವ ಸಿನೆಮಾ ಕ್ಷೇತ್ರವನ್ನು ಕಲೆಯನ್ನಾಗಿ ಪರಿಗಣಿಸಲಾಗಿಲ್ಲ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಅನೇಕಾಂತ ಪ್ರಕಾಶನ ವತಿಯಿಂದ ಕಾಲೇಜಿನ ವಿದ್ಯಾರ್ಥಿ ಲೇಖಕರ ಕೃತಿಗಳಾದ ‘ಹಂಗಿಲ್ಲದ ಹರಿವು’ ಹಾಗೂ ‘ಕನಸಿನೂರಿನ ದಾರಿ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವರ್ಷವೊಂದಕ್ಕೆ 500ಕ್ಕೂ ಅಕ ಚಿತ್ರಗಳು ಬಿಡುಗಡೆಯಾಗುತ್ತವೆ. ಈ ಸಿನೆಮಾಗಳು ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತವೆ ಎಂಬ ಬಗ್ಗೆ ಇನ್ನೂ ಗಂಭೀರವಾಗಿ ಚಿಂತನೆ ಮಾಡಲಾಗಿಲ್ಲ ಎಂದವರು ಹೇಳಿದರು.
ಇಂದಿನ ಶಿಕ್ಷಣದ ವ್ಯವಸ್ಥೆ ಕೇವಲ ಯಂತ್ರದ ಶೈಲಿಯಲ್ಲಿದ್ದು, ವ್ಯಕ್ತಿತ್ವ ರೂಪಿಸುವ ಶಿಕ್ಷಣ ಶಾಲಾ ಕಾಲೇಜುಗಳಲ್ಲಿ ದೊರೆಯದ ಕಾರಣ ವಿದ್ಯಾವಂತರೇ ಇಂದು ಹೆಚ್ಚಾಗಿ ಅಕ್ರಮ ದಾರಿಗಳನ್ನು ಅನುಸರಿಸಲು ಕಾರಣವಾಗುತ್ತಿದೆ ಎಂದವರು ಹೇಳಿದರು.
ಹಿರಿಯ ಲೇಖಕ ದಿ. ಅನಂತ ಮೂರ್ತಿಯವರನ್ನು ನೆನಪಿಸಿಕೊಂಡು ಮಾತನಾಡಿದ ಅವರು, ಪ್ರಗತಿ ಎಂದಾಕ್ಷಣ ರಸ್ತೆ, ಎಸಿ ಮಾಲ್ ಎಂಬುದಾಗಿ ಬಿಂಬಿಸಲಾಗುತ್ತಿದೆ. ನಮ್ಮದೇ ಭೂಮಿ ಕಿತ್ತು ರಸ್ತೆ ಮಾಡುತ್ತಾರೆ. ಆ ರಸ್ತೆಯಲ್ಲಿ ನಾವು ಕ್ಯೂ ನಿಂತು ಹಣ ತೆತ್ತು ಪ್ರಯಾಣಿಸಬೇಕಾದ ಅಭಿವೃದ್ಧಿ ನಮ್ಮದು ಎಂಬ ಅನಂತ ಮೂರ್ತಿಯವರ ಮಾತುಗಳು ನಮ್ಮ ಅಭಿವೃದ್ಧಿ ಯಾವ ತೆರನಾದದ್ದು ಎಂಬುದಕ್ಕೆ ಪ್ರತೀಕವಾಗಿವೆ ಎಂದರು.
ಕಾಲೇಜಿನ 13 ವಿದ್ಯಾರ್ಥಿಗಳ ವಿಮರ್ಶಾ ಲೇಖನಗಳ ಸಂಕಲನ ‘ಹಂಗಿಲ್ಲದ ಹರಿವು’ ಹಾಗೂ ವಿದ್ಯಾರ್ಥಿ ಮುಹಮ್ಮದ್ ಶರೀಫ್ ಕಾಡುಮಠ ಅವರ ಕವನ ಸಂಕಲನ ‘ಕನಸಿನೂರಿನ ದಾರಿ’ಯ ಕೃತಿಗಳ ಬಗ್ಗೆ ಗಿರೀಶ್ ರಾವ್ ಹತ್ವಾರ್ (ಜೋಗಿ) ಮತ್ತು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಆರ್. ನರಸಿಂಹ ಮೂರ್ತಿ ಪರಿಚಯ ನೀಡಿದರು.
ಜೋಗಿಯವರು ಮಾತನಾಡುತ್ತಾ, ಕೃತಿಗಳು ಕೊಡುವ ಆನಂದವನ್ನು ಮತ್ತೊಬ್ಬರಿಗೆ ದಾಟಿಸುವ ಕೆಲಸವೇ ವಿಮರ್ಶೆ. ಈ ವಿಮರ್ಶೆಗೆ ಪರಿಭಾಷೆಯನ್ನು ಬಳಸದೆ ಅನುಭವ, ಅನಿಸಿಕೆಯನ್ನು ವ್ಯಕ್ತಪಡಿಸಿದಾಗ ಅದನ್ನು ಮತ್ತೊಬ್ಬ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಡಾ. ಶಿವರಾಮ ಕಾರಂತ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಲೇಖಕರಾದ ಮುಹಮ್ಮದ್ ಶರ್ೀ ಕಾಡುಮಠ ಹಾಗೂ ಸಂದೀಪ್ ಕೆ. ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್, ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಅಂತಿಮ ಬಿಎ ವಿದ್ಯಾರ್ಥಿನಿ ಕುಸುಮ ಕೆ.ಆರ್. ವಂದಿಸಿದರು. ಪ್ರೊ. ಭುವನೇಶ್ವರಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.







