ವಂಚನೆ ಪ್ರಕರಣ ಕಿರುತೆರೆ ನಟಿ ಇಂದೂ ವರ್ಮಾಳಿಗೆ 3 ವರ್ಷ ಜೈಲು ಶಿಕ್ಷೆ!

ಹೊಸದಿಲ್ಲಿ, ಎಪ್ರಿಲ್.22: ಕಿರುತೆರೆ ನಟಿ ಇಂದೂವರ್ಮಾ ವಂಚನೆಯೊಂದರ 20ವರ್ಷ ಹಿಂದಿನ ಪ್ರಕರಣವೊಂದರಲ್ಲಿ ಮೂರುವರ್ಷ ಜೈಲು ಶಿಕ್ಷೆಯಾಗಿದೆಯೆಂದು ವರದಿಗಳು ತಿಳಿಸಿವೆ. ಇಂದೂ 1996 ಸೆಪ್ಟಂಬರ್ 6ರಿಂದ ಅಕ್ಟೋಬರ್ 6ರ ನಡುವೆ ಹೆಸರು ಬದಲಿಸಿ 17.50ಲಕ್ಷ ಬೆಲೆಬಾಳುವ ಆಭರಣಗಳನ್ನು ಖರೀದಿಸಿದ ಮತ್ತು ತನ್ನ ಮಾಜಿ ಉದ್ಯೋಗದಾತನ ನಕಲಿ ಚೆಕ್ ನೀಡಿದ್ದ ಪ್ರಕರಣದಲ್ಲಿ ಈಗ ತೀರ್ಪು ಹೊರಬಿದ್ದಿದೆ. ತನ್ನ ಹೆಸರುಬದಲಿಸಿ ಶಿವಾನಿ ಅರೋರ ಹೆಸರಿನಲ್ಲಿ ಇಂದೂ ಆಭರಣ ಖರೀದಿಸಿದ್ದರು.
ಮಹಾನಗರ ದಂಡಾಧಿಕಾರಿ ನ್ಯಾಯಾಧೀಶ ಲವ್‌ಲಿನ್ ಇಂದೂ ವಂಚನೆ, ಫೋರ್ಜರಿ ಮತ್ತು ಚೆಕ್ ಮೋಸ ಮಾಡಿದ ಆರೋಪದಲ್ಲಿ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದಲ್ಲದೆ ಮೂರು ತಿಂಗಳೊಳಗೆ ತನ್ನ ಮಾಜಿ ಉದ್ಯೋಗದಾತ ಥಾಮಸ್ ಕುಕ್ ಆ್ಯಂಡ್ ಪ್ರೈವೇಟ್ ಲಿಮಿಟೆಡ್‌ಗೆ 20ಲಕ್ಷ ರೂಪಾಯಿ ನೀಡಬೇಕಾಗಿದೆ. ಬುಧವಾರ ತೀರ್ಪು ನೀಡಿದ ನ್ಯಾಯಾಲಯ" ಅಪರಾಧಿ ಇಂದೂವರ್ಮಾ ಕೇವಲ ಉದ್ಯೋಗದಾತರ ಹಿತದ ವಿರುದ್ಧ ಮಾತ್ರ ಕೆಲಸ ಮಾಡಿದ್ದಲ್ಲ ಅವರಿಗೆ 17.50ಲಕ್ಷ ರೂಪಾಯಿಯ ನಷ್ಟ ಕೂಡಾ ಮಾಡಿದ್ದಾರೆ. ಅಪರಾಧಿಯ ಅಪರಾಧಕ್ಕೆ ಯಾವುದೇ ಕರುಣೆ ತೋರಿಸುವಂತಿಲ್ಲ" ಎಂದು ಹೇಳಿದೆ. ಶಿಕ್ಷೆಗೆ ಒಂದು ತಿಂಗಳು ಅವಧಿ ನೀಡಲಾಗಿದೆ. ಈ ಅವಧಿಯಲ್ಲಿ ಇಂದೂ ಮೇಲ್ಮನವಿ ಸಲ್ಲಿಸಬಹುದಾಗಿದೆ ಮತ್ತು 20,000 ರೂಪಾಯಿ ಬಾಂಡ್‌ಕೂಡ ಭರ್ತಿಮಾಡಲು ನ್ಯಾಯಾಲಯ ಸೂಚಿಸಿರುವುದಾಗಿ ವರದಿಯಾಗಿದೆ.





