ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ:ಹೈಕೋರ್ಟ್ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆ

ಹೊಸದಿಲ್ಲಿ,ಎ.22: ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿರುವ ಉತ್ತರಾಖಂಡ್ ಉಚ್ಚ ನ್ಯಾಯಾಲಯದ ಆದೇಶಕ್ಕೆ ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ಎ.27ರವರೆಗೆ ತಡೆಯಾಜ್ಞೆಯನ್ನು ನೀಡುವುದರೊಂದಿಗೆ ರಾಜ್ಯದಲ್ಲಿಯ ನಿರಂತರ ರಾಜಕೀಯ ನಾಟಕವು ಹೊಸ ತಿರುವನ್ನು ಪಡೆದುಕೊಂಡಿದೆ.
ಸಂಕ್ಷಿಪ್ತ ಆದೇಶವನ್ನು ಹೊರಡಿಸುವ ಮುನ್ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ಪೀಠವು,ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ನೀಡಿದ ‘ಕೇಂದ್ರ ಸರಕಾರವು ಮುಂದಿನ ವಿಚಾರಣೆಯ ದಿನಾಂಕದವರೆಗೆ ರಾಷ್ಟ್ರಪತಿ ಆಡಳಿತವನ್ನು ಹಿಂದೆಗೆದುಕೊಳ್ಳುವುದಿಲ್ಲ’ ಎಂಬ ಮುಚ್ಚಳಿಕೆಯನ್ನು ದಾಖಲಿಸಿಕೊಂಡಿತು.
ತೀರ್ಪಿನ ಪ್ರತಿಯು ಎರಡೂ ಪಕ್ಷಗಳಿಗೆ ಲಭ್ಯವಾಗಿಲ್ಲ, ಹೀಗಾಗಿ ಉಭಯ ಪಕ್ಷಗಳಿಗೆ ಸಮತೋಲಿತ ಕ್ರಮವಾಗಿ ಉಚ್ಚ ನ್ಯಾಯಾಲಯದ ಆದೇಶವನ್ನು ಮುಂದಿನ ವಿಚಾರಣಾ ದಿನಾಂಕವಾದ ಎ.27ರವರೆಗೆ ತಾನು ಅಮಾನತಿನಲ್ಲಿರಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.
ಎ.26ರೊಳಗೆ ಗುರುವಾರದ ಆದೇಶದ ಪ್ರತಿಗಳನ್ನು ಎರಡೂ ಪಕ್ಷಗಳಿಗೆ ಮತ್ತು ತನಗೆ ಸಲ್ಲಿಸುವಂತೆ ಪೀಠವು ಉಚ್ಚ ನ್ಯಾಯಾಲಯಕ್ಕೆ ನಿರ್ದೇಶ ನೀಡಿತು.
ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಹರೀಶ್ ರಾವತ್ ನೇತೃತ್ವದ ಸರಕಾರವು ಮತ್ತೆ ಅಧಿಕಾರದಿಂದ ವಂಚಿತಗೊಂಡಿದೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿರುವ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರವು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಹರೀಶ ರಾವತ್ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೋಟಿಸುಗಳನ್ನು ಸರ್ವೋಚ್ಚ ನ್ಯಾಯಾಲಯವು ಹೊರಡಿಸಿತು.







