ಪುತ್ತೂರು ನಗರ, ಗ್ರಾಮಾಂತರಗಳಲ್ಲಿ ಹೆಚ್ಚುತ್ತಿದೆ ನೀರಿನ ಭವಣೆ
ಬತ್ತಿಹೋಗುತ್ತಿರುವ ಕೊಳವೆ ಬಾವಿ - ಈ ಬಾರಿ ಅಧಿಕ ನೀರಿನ ಸಮಸ್ಯೆ

ಪುತ್ತೂರು: ಈ ಬಾರಿಯ ಬಿಸಿಲ ಬೇಗೆ ಗ್ರಾಮೀಣ ಪ್ರದೇಶಕ್ಕೆ ಚೆನ್ನಾಗಿಯೇ ತಟ್ಟಿದೆ. ಮಾರ್ಚ್ ಕೊನೇ ವಾರದಲ್ಲಿ ಅಲ್ಲಲ್ಲಿ ನೀರಿಗೆ ತೊಂದರೆ ಉಂಟಾಗಿದ್ದು ಎಪ್ರಿಲ್ ಎರಡನೇ ವಾರದಲ್ಲಿ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು , ಬಹುತೇಕ ಕಡೆಗಳಲ್ಲಿ ಕೊಳವೆ ಬಾವಿ ಬತ್ತಿಹೋಗಿದ್ದು, ಕೆರೆ , ಬಾವಿಗಳೂ ನೀರಿಲ್ಲದೆ ಬತ್ತಿ ಹೋಗಿವೆ. ಕುಡಿಯಲು ನೀರಿಲ್ಲದೆ ಒಂದೆಡೆ ಜನತೆ ಸಂಕಷ್ಟ ಅನುಭವಿಸುತ್ತಿದ್ದರೆ ಇನ್ನೊಂದೆಡೆ ನೀರಿಲ್ಲದೆ ಕೃಷಿ ಭೂಮಿಯೂ ಒಣಗುತ್ತಿದೆ.
ಕಳೆದ ವರ್ಷ ಮಳೆ ಚೆನ್ನಾಗಿಯೇ ಬಂದಿತ್ತು. ಡಿಸೆಂಬರ್ ತಿಂಗಳ ಕೊನೆಯ ವರೆಗೂ ಕರಾವಳಿಯಲ್ಲಿ ಮಳೆಯಾಗಿತ್ತು. ಆದರೆ ಮಳೆ ನಿಂತು ಮೂರೇ ತಿಂಗಳ ಬಳಿಕ ನೀರಿನ ಸಮಸ್ಯೆ ಉಂಟಾಗಿರುವುದು ಮಾನವನೊಂದಿಗೆ ಪೃಕೃತಿ ಮುನಿಸಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪ್ರತಿ ಭಾರಿ ಮೇ ತಿಂಗಳ ಬಳಿಕ ನೀರಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು ಆದರೆ ಈ ಬಾರಿ ಈಗಾಗಲೇ ಹತ್ತಕ್ಕೂ ಮಿಕ್ಕಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ವಿಪರೀತ ಸಮಸ್ಯೆ ಉಂಟಾಗಿದೆ. ಒಳಮೊಗ್ರು, ಬೆಟ್ಟಂಪಾಡಿ, ಮುಂಡೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು, ಕೆಯ್ಯೂರು, ಕೆದಂಬಾಡಿ, ಅರಿಯಡ್ಕ , ನಿಡ್ಪಳ್ಳಿ, ಕಾಣಿಯೂರು ಹಾಗೂ ಆರ್ಯಾಪು ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಈ ಪೈಕಿ ಬಡಗನ್ನೂರು, ಬೆಟ್ಟಂಪಾಡಿ, ಮುಂಡೂರು ಮತ್ತು ಕೆದಂಬಾಡಿ ಗ್ರಾಮಗಳಲ್ಲಿ ಜನ ನೀರಿಗಾಗಿ ಬೀದಿಗಳಿದು ಹೋರಾಟವನ್ನು ನಡೆಸಿದ್ದಾರೆ. ನೀರು ವಿತರಣೆ ಮಾಡುತ್ತಿದ್ದ ಹೆಚ್ಚಿನ ಕೊಳವೆ ಬಾವಿಗಳು ಬತ್ತಿ ಹೋಗಿರುವ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ ನೀರಿನ ಸಮಸ್ಯೆಯನ್ನು ನಿವಾರಿಸಲು ಗ್ರಾಮ ಪಂಚಾಯಿತಿಗಳಿಗೆ ಸಾಧ್ಯವಾಗುತ್ತಿಲ್ಲ. ವಾರದಲ್ಲಿ ಎರಡು ದಿನ ನೀರು
ಹೆಚ್ಚಿನ ಗ್ರಾಪಂಗಳಲ್ಲಿ ವಾರದಲ್ಲಿ ಎರಡು ದಿನ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಗ್ರಾಮಸ್ಥರಿಗೆ ಸಾಕಾಗುತ್ತಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಗ್ರಾಮಸ್ಥರು ಕುಡಿಯಲು ನೀರು ಕೊಡಿ ಎಂದು ಗ್ರಾಮಸಭೆಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೋರಾಟ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಗ್ರಾಮಸ್ಥರ ಬೇಡಿಕೆಯಂತೆ ನೀರು ವಿತರಿಸಲು ಯಾವ ಗ್ರಾಪಂ ಆಡಳಿತಕ್ಕೂ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಕಡೆಗಳಲ್ಲಿ ಜನತಾ ಕಾಲೊನಿ ನಿವಾಸಿಗಳೇ ನೀರಿಗಾಗಿ ಹೆಚ್ಚಿನ ತೊಂದರೆಗೊಳಗಾಗುತ್ತಿದ್ದಾರೆ.
ಮಿತಿಮೀರಿದ ಕೊಳವೆಬಾವಿ
ಅಂತರ್ಜಲ ಕುಸಿತ
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗಳಿಗೆ ಮತ್ತು ಕುಡಿಯುವ ನೀರಿಗಾಗಿ ಮಿತಿಮೀರಿದ ಸಂಖ್ಯೆಯಲ್ಲಿ ಕೊಳವೆ ಬಾವಿಯನ್ನು ಕೊರೆದಿರುವುದೇ ನೀರಿನ ಅಂತರ್ಜಲ ಕುಸಿಯಲು ಕಾರಣ ಎಂಬುದು ತಜ್ಞರ ಮಾತು. ಕೊಳವೆ ಬಾವಿ ಕೊರೆದು ನೀರು ಸಿಗದೇ ಇದ್ದರೂ ಅಂತರ್ಜಲಕ್ಕೆ ಹಾನಿಯಾಗುತ್ತದೆ. ಕೊಳವೆ ಬಾವಿಯ ಕಾರಣಕ್ಕೆ ಬಾವಿಗಳಲ್ಲಿನ ನೀರು ಬತ್ತಿಹೋಗುತ್ತಿದೆ. ಕೊಳವೆ ಬಾವಿಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕುತ್ತಿದ್ದರೆ ಸಮಸ್ಯೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಈಗ ಕೊಳವೆ ಬಾವಿ ತೆಗೆದರೂ ನೀರು ಸಿಗುತ್ತಿಲ್ಲ. ಇರುವ ಕೊಳವೆ ಬಾವಿಯೂ ಬತ್ತಿಹೋಗುತ್ತಿದೆ. ಒಳಮೊಗ್ರು ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿ ಬತ್ತಿಹೋಗಿದೆ. ಅಂತರ್ಜಲ ಕುಸಿತಕ್ಕೊಳಗಾದರೆ ಮುಂದಿನ ದಿನಗಳಲ್ಲಿ ಎಲ್ಲೂ ನೀರು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ ಎಂಬುದು ಜನರ ಅಭಿಪ್ರಾಯ.
ಬಳಕೆಯಾಗದ ಕಿಂಡಿ ಅಣೆಕಟ್ಟು: ಜನರ ನೀರಿನ ಸಮಸ್ಯೆಯನ್ನು ಪರಿಹರಿಸಲೆಂದು ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ತೋಡುಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಆದರೆ ಯಾವ ಅಣೆಕಟ್ಟಿನ ನೀರೂ ಕುಡಿಯುವ ನೀರಿಗಾಗಿ ಬಳಕೆಯಾಗುತ್ತಿಲ್ಲ. ಒಳಮೊಗ್ರು ಗ್ರಾಮದಲ್ಲಿ 8 , ಕೆದಂಬಾಡಿಯಲ್ಲಿ 12 ಮತ್ತು ನೆಟ್ಟಣಿಗೆ ಮುಡ್ನೂರಿನಲ್ಲಿ 3 ಕ್ಕೂ ಮಿಕ್ಕಿ ಕಿಂಡಿ ಅಣೆಕಟ್ಟುಗಳಿವೆ ಆದರೆ ಇದರ ನೀರು ಎಲ್ಲೂ ಕುಡಿಯುವುದಕ್ಕೆ ಬಳಕೆಯಾಗುತ್ತಿಲ್ಲ. ಕಿಂಡಿ ಅಣೆಕಟ್ಟಿನ ನೀರನ್ನು ವರ್ಷದಲ್ಲಿ ಮೂರು ತಿಂಗಳು ಕುಡಿಯುವ ನೀರಿಗೆ ಬಳಕೆ ಮಾಡುವಲ್ಲಿ ವ್ಯವಸ್ಥೆ ಮಾಡಿದ್ದರೆ ಕೊಳವೆ ಬಾವಿಯಲ್ಲಿನ ನೀರು ಬತ್ತಿಹೋಗುವುದನ್ನು ತಡೆಯಬಹುದಿತ್ತು. ಆದರೆ ಎಲ್ಲಾ ಕಿಂಡಿ ಅಣೆಕಟ್ಟುಗಳ ನೀರು ಕೇವಲ ಕೃಷಿಗಾಗಿ ಮಾತ್ರ ಬಳಕೆಯಾಗುತ್ತಿದ್ದು ಜನರ ಕುಡಿಯುವ ನೀರಿನ ದಾಹವನ್ನು ನೀಗಿಸಲು ಉಪಯೋಗಿಸುತ್ತಿಲ್ಲ. ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ಲಭ್ಯವಿದ್ದರೂ ವಿದ್ಯುತ್‌ನ ಕಣ್ಣಾಮುಚ್ಚಾಲೆಯಿಂದಾಗಿ ಕುಡಿಯುವ ನೀರಿಗೆ ತತ್ವಾರವಾಗಿತ್ತು. ಇದೀಗ ಎಪ್ರಿಲ್‌ನಲ್ಲಿ ವಿದ್ಯುತ್ ಸಮಸ್ಯೆಯಿಲ್ಲ ಆದರೆ ನೀರಿನ ಅಭಾವದಿಂದಾಗಿ ಜನತೆ ಕಷ್ಟ ಅನುಭವಿಸುವಂತಾಗಿದೆ. ನೀರು ಇಂಗಿಸುವ ವ್ಯವಸ್ಥೆಯಿಲ್ಲ
ಮಳೆಗಾಲದಲ್ಲಿ ನೀರು ಇಂಗಿಸುವ ವ್ಯವಸ್ಥೆ, ಮಳೆ ಕೊಲು ಮಾಡುವ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿ ಎಲ್ಲೂ ಇಲ್ಲ. ಮಳೆ ನೀರನ್ನು ಕೊಳವೆಬಾವಿಗಳಿಗೆ ಮರುಪೂರಣಗೊಳಿಸಿ, ಇಂಗುಗುಂಡಿ ನಿರ್ಮಿಸಿ, ಕೆರೆ ಮತ್ತು ಬಾವಿಗಳಲ್ಲಿ ನೀರನ್ನು ಇಂಗಿಸುವ ಕಾರ್ಯಕ್ಕೆ ಜನರು ಮಾಡುತ್ತಿದ್ದಲ್ಲಿ ಇಷ್ಟೊಂದು ನೀರಿನ ಭವಣೆ ಎದುರಿಸಬೇಕಾಗಿರಲಿಲ್ಲ. ನೀರಿಂಗಿಸುವಿಕೆಯ ಪ್ರಯೋಜನದ ಕುರಿತು ಸ್ವಯಂ ಸೇವಾ ಸಂಸ್ಥೆಗಳು, ಇಲಾಖೆ ಜನರಿಗೆ ಸಾಕಷ್ಟು ತಿಳುವಳಿಕೆ ನೀಡಿದರೂ ಯಾರೂ ಈ ಕೆಲಸ ಮಾಡುತ್ತಿಲ್ಲ. ಗ್ರಾಮಾಂತರ ಭಾಗದಲ್ಲಿ ನೀರು ಇಂಗಿಸುವ ಕಾರ್ಯಕ್ಕೆ ಯಥೇಚ್ಚ ಅವಕಾಶಗಳಿದೆ. ನೀರು ಇಂಗಿಸುವ ಕಾರ್ಯವನ್ನು ಮಾಡಿರುತ್ತಿದ್ದರೆ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ ಮತ್ತು ಅಂತರ್ಜಲ ಮಟ್ಟವೂ ಕುಸಿಯುತ್ತಿರಲಿಲ್ಲ ಎಂಬುದು ವೈಜ್ಞಾನಿಕ ಸತ್ಯವಾಗಿದೆ. ನಗರಸಭೆಗೆ ದಿನಕ್ಕೆ 75 ಲಕ್ಷ ಲೀಟರ್ ನೀರು:
ಪುತ್ತೂರು ನಗರಸಭೆಯೂ ನೀರಿನ ಬರವನ್ನು ಎದುರಿಸುತ್ತಿದೆ. ನಗರ ವ್ಯಾಪ್ತಿಯ ಹಲವು ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. 53ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪುತ್ತೂರು ನಗರ ಸಭೆಯಲ್ಲಿ ಪ್ರತಿದಿನ 75 ಲಕ್ಷ ಲೀಟರ್ ನೀರು ಬೇಕಾಗಿದೆ. 9200 ಮನೆಗಳು, 34 ಶಿಕ್ಷಣ ಸಂಸ್ಥೆಗಳು, 15ಕ್ಕೂ ಅಧಿಕ ಶಾಲೆಗಳು ಅಂಗನವಾಡಿಗಳು ಇಲ್ಲಿ ನೀರಿನ ಸಂಪರ್ಕ ಪಡೆದುಕೊಂಡಿದೆ. ಇವೆಲ್ಲಕ್ಕೂ ನೀರು ಪೂರೈಕೆಗಾಗಿ ಉಪ್ಪಿನಂಗಡಿಯ ಕುಮಾರಧಾರಾ ನದಿಯಲ್ಲಿನ ನೆಕ್ಕಿಲಾಡಿಯಲ್ಲಿರುವ ರೇಚಕದಿಂದ ಸುಮಾರು 65ಲಕ್ಷ ಲೀಟರ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ 121 ಕೊಳವೆ ಬಾವಿಗಳಿಂದ ನೇರವಾಗಿ ಮನೆ ಮನೆಗಳಿಗೆ ನೀರು ವಿತರಿಸಲಾಗುತ್ತಿದೆ. ಅದರೂ ನೀರಿನ ಭವಣೆಯನ್ನು ನಿವಾರಿಸಲು ಸಾಧ್ಯವಾಗದೆ ಇದೀಗ ಟ್ಯಾಂಕರ್‌ಗಳ ಮೂಲಕ ದಿನಕ್ಕೊಮ್ಮೆ, ಕೆಲವು ಕಡೆಗಳಲ್ಲಿ 2 ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ಇದಲ್ಲದೆ ನಗರ ಸಭೆಯು ಈ ಬಾರಿ 21 ಹೊಸ ಕೊಳವೆ ಬಾವಿಗಳನ್ನು ನಿರ್ಮಿಸಿದ್ದು, ಅದಕ್ಕೂ ಪಂಪು ಅಳವಡಿಸಿ ನೀರು ಪೂರೈಕೆ ಮಾಡುತ್ತಿದೆ. ಅದರೂ ಎಲ್ಲಾ ಕಡೆಗಳಿಗೆ ಸಮರ್ಪಕವಾಗಿ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಕೋರ್ಟ್...........
ಪುತ್ತೂರು ನಗರಸಭೆಗೆ ಮೂಲ ನೀರಿನ ಆದಾರವಾಗಿರುವ ನೆಕ್ಕೆಲಾಡಿ ಕುಮಾರಧಾರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಹಾಗೂ ಕೊಳವೆ ಬಾವಿಗಳ ನೀರಿನ ಪ್ರಮಾಣವು ತಳಮಟ್ಟಕ್ಕೆ ಇಳಿದಿರುವುದರಿಂದ ಮುಂದಿನ ದಿನಗಳಲ್ಲಿ ನಗರ ಸಭೆಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿರುವುದರಿಂದ ಖಾಸಗಿ ನೀರಿನ ಜೋಡಣೆದಾರರು ನೀರನ್ನು ಮಿತವಾಗಿ ಬಳಸಬೇಕು. ಎರಡು, ಮೂರು ದಿನಗಳಿಗೆ ಬೇಕಾದಷ್ಟು ದಾಸ್ತಾನು ಯಾ ಸಂಪು ಮಾಡಿ ನೀರನ್ನು ಮಿತವಾಗಿ ಬಳಸಬೇಕು. ಗಿಡಗಳಿಗೆ ಹಾಕುವುದು, ಪೋಲು ಮಾಡುವುದು ಮಾಡಬಾರದು.







