ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರವನ್ನು ಉರುಳಿಸಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯಿಂದ ಸಂಚು: ಉಗ್ರಪ್ಪ ಆರೋಪ

ಬೆಂಗಳೂರು.ಏ.22: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಉರುಳಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸಂಚು ನಡೆಸುತ್ತಿದ್ದು, ಇದರ ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಉತ್ತರಾಖಂಡ್‌ನಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಿ ಮುಖ್ಯಮಂತ್ರಿ ರಾವತ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಸಂಚು ಹೂಡಿದ ಬಿಜೆಪಿ ಕೊನೆಗೂ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿತು. ಇದೀಗ ಕರ್ನಾಟಕದ ಸರದಿ ಎಂದು ಅವರು ಅಭಿಪ್ರಾಯಿಸಿದರು.
ಈ ಮಾತನ್ನು ನಾನಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಹಿಂದೆ ಹೇಳಿದ್ದಾರೆ.ನಮ್ಮ ಮುಂದಿನ ಗುರಿ ಕರ್ನಾಟಕ ಎಂದಿದ್ದಾರೆ. ಆದರೆ ಆ ಸಂಚು ವಿಫಲವಾಗಲಿದೆ ಎಂದು ಅವರು ಹೇಳಿದರು.
ಹಿಂದೆ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಅವರ ಸರ್ಕಾರ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸುವ ಮೂಲಕ ಪ್ರತಿಪಕ್ಷಗಳನ್ನು ದುರ್ಬಲಗೊಳಿಸಿತ್ತು.ಅದೇ ಕೆಲಸ ಉತ್ತರಾಖಂಡ್‌ನಲ್ಲೂ ನಡೆಯುತ್ತಿದೆ ಎಂದರು.
ಇದನ್ನು ನೋಡಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ.ಅದೆಂದರೆ ಯಡಿಯೂರಪ್ಪ ಹಾಗೂ ನರೇಂದ್ರಮೋದಿ ಒಂದೇ ನಾಣ್ಯದ ಎರಡು ಮುಖಗಳು.ಯಡಿಯೂರಪ್ಪ ಅವರಿಗೆ ಮೋದಿ ಮಾದರಿ.ಮೋದಿ ಅವರಿಗೆ ಯಡಿಯೂರಪ್ಪ ಮಾದರಿ ಎಂದು ವ್ಯಂಗ್ಯವಾಡಿದರು.
ಸುಮಾರು 1800 ಕೋಟಿ ರೂ ಮೌಲ್ಯದ ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರು ಪ್ರಧಾನಿ ಮೋದಿ ಅವರಿಗೆ ಆಪ್ತರು.ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾರಾಜೇ ಅವರಿಗೆ ಆಪ್ತರು.ಇದೇ ರೀತಿ ಯಡಿಯೂರಪ್ಪ ಕೂಡಾ ಇಲ್ಲಿ ಒಂದು ಲಕ್ಷ ಕೋಟಿ ರೂ ಮೌಲ್ಯದ ಆಕ್ರಮ ಗಣಿಗಾರಿಕೆಯ ಆರೋಪಿಗೆ ರಕ್ಷಕರು.ಖುದ್ದು ಅವರೇ ಸೌತ್ ವೆಸ್ಟ್ ಮೈನಿಂಗ್ ಕಂಪನಿಯ ಮೂಲಕ ಚೆಕ್ ಮೂಲಕ ಹಣ ಪಡೆದಿದ್ದರು ಎಂದರು.
ಉತ್ತರಾಖಂಡ್ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಕೇಂದ್ರ ಸರ್ಕಾರದ ಕ್ರಮವನ್ನು ನೈನಿತಾಲ್ ನ್ಯಾಯಾಲಯ ರದ್ದು ಮಾಡಿದೆ.ಆದರೂ ಕೇಂದ್ರ ಸರ್ಕಾರ ತನ್ನ ಕ್ರಮವೇ ಸರಿ ಎಂದು ಸಾಧಿಸಲು ಹೊರಟಿದೆ.
ಪರಿಸ್ಥಿತಿಯನ್ನು ನೋಡಿದರೆ ಇವರದು ಪ್ರಜಾಪ್ರಭುತ್ವವಾದಿ ಧೋರಣೆಯಲ್ಲ.ಸರ್ವಾಧಿಕಾರಿ ದೋರಣೆ ಎಂಬುದು ಸ್ಪಷ್ಟವಾಗುತ್ತದೆ.ಯಾವ ಕಾರಣಕ್ಕೂ ದೇಶದ ಜನ ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಕರ್ನಾಟಕದಲ್ಲಿ ಹಿಂದೆ ಎಸ್.ಆರ್.ಬೊಮ್ಮಾಯಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಅಂದಿನ ರಾಜ್ಯಪಾಲರು ಕ್ರಮ ಕೈಗೊಂಡಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದುದು ಹೌದಾದರೂ ರಾಷ್ಟ್ರಪತಿ ಆಳ್ವಿಕೆ ಹೇರುವ ಕುರಿತಂತೆ ಸ್ಪಷ್ಟ ಕಾನೂನು ಇರಲಿಲ್ಲ.
ಆದರೆ ಎಸ್.ಆರ್.ಬೊಮ್ಮಾಯಿ ಸರ್ಕಾರವನ್ನು ವಜಾ ಮಾಡಿದ ಪ್ರಕರಣ ನಡೆದ ನಂತರ 1995 ರಲ್ಲಿ ಸರ್ವೋಚ್ಚ ನ್ಯಾಯಾಲಯ ಒಂದು ತೀರ್ಪು ನೀಡಿ,ಸರ್ಕಾರದ ಬಲಾಬಲ ತೀರ್ಮಾನವಾಗಬೇಕಿರುವುದು ವಿಧಾನಸಭೆಯಲ್ಲೇ ಹೊರತು ರಾಜಭವನದ ಅಂಗಳದಲ್ಲಲ್ಲ ಎಂದು ಹೇಳಿತು.
ಇದಾದ ನಂತರ ಯಾವ ಸರ್ಕಾರಗಳೂ ಈ ಕಾನೂನಿನ ಹಿನ್ನೆಲೆಯಲ್ಲಿ ಮುನ್ನಡೆದವು.ಇದೇ ಯಡಿಯೂರಪ್ಪ ಅವರ ಸರ್ಕಾರವನ್ನು ವಜಾ ಮಾಡಲು ಹಿಂದಿನ ರಾಜ್ಯಪಾಲರು ಶಿಫಾರಸು ಮಾಡಿದರೂ ಕೇಂದ್ರ ಸರ್ಕಾರ ಅದನ್ನು ಒಪ್ಪಲಿಲ್ಲ.
ಈಗ ಬಿಜೆಪಿಯವರು ರಾಜಭವನವನ್ನು ತಮ್ಮ ಕಛೇರಿಯನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ.ಕರ್ನಾಟಕದ ರಾಜಭವನ ಇದೀಗ ಬಿಜೆಪಿ ನಾಯಕರ ಕೇಂದ್ರ ಸ್ಥಾನ ಎಂದು ವ್ಯಂಗ್ಯವಾಡಿದರು.







