ತನ್ನ 90 ನೆ ವರ್ಷದಲ್ಲಿ ಭಾರತೀಯನಾಗಿ ಹುಟ್ಟಿದ ಸ್ಪಾನಿಶ್ ಪಾದ್ರಿ !

ಮುಂಬೈ, ಎ. 22 : " ಭಾರತದಂತಹ ದೇಶ ಇನ್ನೊಂದಿಲ್ಲ. ಈಗ ನಾನು ಅತ್ಯಂತ ಸಂತುಷ್ಟ. ನನ್ನ ಸಮಾಧಿ ಒಬ್ಬ ಭಾರತೀಯನ ಸಮಾಧಿಯಾಗಿ ಭಾರತದಲ್ಲಿರುತ್ತದೆ. ಭಾರತ್ ಮಾತಾಕಿ ಜೈ " ಎಂದು ಹೇಳಿದವರು ಫಾದರ್ ಗುಸ್ಸಿ ಫ್ರೆಡ್ರಿಕ್ ಸೋಪೆನ .
ಕಳೆದ 6 ದಶಕಗಳಿಂದ ಭಾರತದಲ್ಲಿ ನೆಲೆಸಿರುವ 90 ವರ್ಷದ ಸ್ಪಾನಿಶ್ ಕ್ರೈಸ್ತ ಪಾದ್ರಿ ಸೋಪೆನ ಅವರ 38 ವರ್ಷಗಳ ಪ್ರಯತ್ನದ ಫ಼ಲ ಗುರುವಾರ ಸಿಕ್ಕಿದೆ. ಈಗ ಅವರು ಅಧಿಕೃತವಾಗಿ ಭಾರತದ ಪ್ರಜೆ ! ಈ ಸಂಬಂಧ ಸರಕಾರದ ಅಧಿಕೃತ ದಾಖಲೆ ಪತ್ರವನ್ನು ಮುಂಬೈ ಸಬರ್ಬನ್ ಜಿಲ್ಲಾಧಿಕಾರಿ ಶೇಖರ್ ಚನ್ನೆ ಅವರು ಫಾದರ್ ಗೆ ಹಸ್ತಾಂತರಿಸಿದರು.
ಸೊಸೈಟಿ ಆಫ್ ಜೀಸಸ್ ಮೂಲಕ ಸಮಾಜ ಸೇವೆಗಾಗಿ 1947 ರಲ್ಲಿ 22 ರ ಯುವಕನಾಗಿ ಬಂದ ಫಾದರ್ ಸೋಪೆನ ಮುಂಬೈ, ಥಾಣೆ , ನಾಶಿಕ್ ಹಾಗು ರಾಯಗಡ ಜಿಲ್ಲೆಗಳಲ್ಲಿ ಜನರ ಸೇವೆ ಮಾಡಿದ್ದಾರೆ , ಅವರಿಗೆ ಸರಕಾರದ ಯೋಜನೆಗಳ ಅರಿವು ಮೂಡಿಸಲು ಶ್ರಮಿಸಿದ್ದಾರೆ.
1990 ರಲ್ಲಿ ಅಪಘಾತವೊಂದರಲ್ಲಿ ತನ್ನ ಎಡಗಾಲನ್ನು ಕಳೆದುಕೊಂಡರೂ ಫಾದರ್ ಸೋಪೆನ ತನ್ನ ಸೇವಾ ಕಾರ್ಯಗಳನ್ನು ನಿಲ್ಲಿಸಲಿಲ್ಲ. ಭಾರತದ ನಾಗರಿಕತ್ವ ಪಡೆಯುವ ಪ್ರಯತ್ನದ ಭಾಗವಾಗಿ ಫಾದರ್ ಸೋಪೆನ ಅವರು ಹಿಂದಿ ಪ್ರಾಥಮಿಕ ಪರೀಕ್ಷೆಯನ್ನು ಬರೆದರು ಹಾಗು ಮುಂಬೈಯ ಸಂತ ಝೇವಿಯರ್ ಕಾಲೇಜಿನಲ್ಲಿ ತತ್ವಜ್ಞಾನದ ಪದವಿ ಪಡೆದರು.







