ಬರ, ಕುಡಿಯುವ ನೀರು ನಿರ್ವಹಣೆ ಕುರಿತು ಪರಿಶೀಲನೆ
ಜಿಲ್ಲಾಧಿಕಾರಿ ಮುಂಡಗೋಡಕ್ಕೆ ದಿಢೀರ್ ಭೇಟಿ

ಮುಂಡಗೋಡ, ಎ.22: ಉತ್ತರ ಕನ್ನಡ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಶುಕ್ರವಾರ ಮುಂಡಗೋಡಕ್ಕೆ ದಿಢೀರ್ ಭೇಟಿ ನೀಡಿದರಲ್ಲದೆ, ಅಧಿಕಾರಿಗಳ ಸಭೆ ನಡೆಸಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ನಿರ್ವಹಣೆ ಕುರಿತು ಸೂಚನೆ ಹಾಗೂ ಮಾರ್ಗದರ್ಶನ ನೀಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪಪಂ ಮುಖ್ಯಾಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ, ಜಿಪಂ ಅಭಿಯಂತರರು, ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಸಮರ್ಪಕವಾಗಿ ಪರಿಸ್ಥಿತಿ ನಿರ್ವಹಿಸುವ ಕುರಿತು ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಹಾಗೂ ತಹಶೀಲ್ದಾರ್ ಅಶೋಕ ಗುರಾಣಿ ಉಪಸ್ಥಿತರಿದ್ದರು.
ಬರದ ಹಿನ್ನೆಲೆಯಲ್ಲಿ ನೀರು ಎಲ್ಲಿಯೂ ಪೋಲಾಗದಂತೆ ತಡೆಗಟ್ಟಲು ಸಂಬಂಧಿಸಿದವರಿಗೆ ಸೂಚಿಸಿದರು. ಸನವಳ್ಳಿ ಜಲಾಶಯಕ್ಕೆ ಭೇಟಿ ನೀಡಿ, ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸ್ಥಾವರ ಹಾಗೂ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು. ಪಪಂ ಸಿಬ್ಬಂದಿಯಿಂದ ಮಾಹಿತಿ ಪಡೆದು ಮುಂದಿನ ಕಾರ್ಯತಂತ್ರ ರೂಪಿಸುವ ಕುರಿತು ಸಲಹೆ ಸೂಚನೆ ನೀಡಿದರು.
ಕಳೆದ ಮೂವತ್ತು ವರ್ಷಗಳಲ್ಲಿ ಈ ರೀತಿಯ ಅನಾವೃಷ್ಟಿಯಾಗಿರಲಿಲ್ಲ. ಈ ಬಾರಿ ಜಲಾಶಯದಲ್ಲಿ ನೀರು ಕಡಿಮೆ ಇರುವುದರಿಂದ ಈಗಲೇ ಜಲಾಶಯದ ಹೂಳೆತ್ತಲು ಒಳ್ಳೆಯ ಅವಕಾಶವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ಸಾರ್ವಜನಿಕರ ಬೇಡಿಕೆಗೆ, ಜಿಲ್ಲಾಧಿಕಾರಿಗಳು ಈ ಕೆಲಸಕ್ಕೆ ಸುತ್ತಲಿನ ಗ್ರಾಮಸ್ಥರು ಸಹಕಾರ ನೀಡಬೇಕು. ಎರಡು ಜೆಸಿಬಿ ಬಳಸಿ ಹೂಳೆತ್ತಲಾಗುವುದು. ಆದರೆ ಹೂಳೆತ್ತಿದ ಮಣ್ಣನ್ನು ರೈತರು ತಮ್ಮ ತಮ್ಮ ಹೊಲಗಳಿಗೆ ಸಾಗಿಸಿಕೊಳ್ಳಬೇಕೆಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಸನವಳ್ಳಿ ಮತ್ತು ಸನವಳ್ಳಿ ಫ್ಲಾಟ್‌ಗೆ ಇದೇ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದರು. ನೀರಿನ ಸದುಪಯೋಗವಾಗದೆ ಇಟ್ಟಿಗೆ ಭಟ್ಟಿಗೆ ಬಳಕೆಯಾಗುತ್ತಿರುವ ಕುರಿತು ಪತ್ರಕರ್ತರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನೀರಿನ ಸದುಪಯೋಗ ಮಾಡಿಕೊಳ್ಳಬೇಕು. ಅನಧಿಕೃತ ಬಳಕೆ ಮುಂದುವರಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಹಶೀಲ್ದಾರ್ ಮತ್ತು ಎಸಿಯವರಿಗೆ ತಾಕೀತು ಮಾಡಿದರು.
ಮುಂಡಗೋಡ ಪಟ್ಟಣಕ್ಕೆ ವರದಾ ನದಿಯಿಂದ ಕುಡಿಯುವ ನೀರು ಪೂರೈಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಎಸ್ಟಿಮೇಟ್ ಪ್ರಕಾರ ಕಾಮಗಾರಿ ಸ್ಥಳದಲ್ಲಿ ಅಗೆದ ಮಣ್ಣನ್ನು 200ಮೀ. ದೂರಕ್ಕೆ ಸಾಗಿಸಬೇಕು. ಆದರೆ ಇಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಮಣ್ಣು ಸುರಿಯಲಾಗಿದೆ. ಇದರಿಂದ ಕಾಮಗಾರಿಯ ಪ್ರಗತಿಗೆ ತೊಂದರೆಯಾಗುತ್ತದೆ. ನಿಯಮಾನುಸಾರ ಕೆಲಸ ನಿರ್ವಹಿಸಿ ಎಂದು ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಂತರ ಮಿನಿವಿಧಾನಸೌಧಕ್ಕೆ ಭೇಟಿ ನೀಡಿ, ಸಭಾಭವನ, ಕೋರ್ಟ್ ಹಾಲ್, ಪಡಸಾಲೆಯ ಪೀಠೋಪಕರಣ ಕಾಮಗಾರಿ ಪೂರ್ಣಗೊಂಡಿರುವುದನ್ನು ವೀಕ್ಷಿಸಿದರು. ಮಿನಿವಿಧಾನಸೌಧದ ಸುತ್ತಮುತ್ತಲೂ ಖುಲ್ಲಾ ಜಾಗವಿದ್ದು, ಈ ಸ್ಥಳದಲ್ಲಿ ಉದ್ಯಾನ ನಿರ್ಮಿಸುವಂತೆ ಸಲಹೆ ನೀಡಿದರು. ಮಿನಿ ಧಾನಸೌಧದ ಮುಖ್ಯ ದ್ವಾರದ ಬಳಿ ನಿಂತು ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಕಚೇರಿಗೆ ಬರುವ ಸಾರ್ವಜನಿಕರ ಬಳಿ ಚರ್ಚೆ ನಡೆಸಿದರಲ್ಲದೇ, ಅವರ ಕುಂದು ಕೊರತೆಯನ್ನು ಆಲಿಸಿದರು.
ನಂತರ ಬಾಚಣಕಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಅಲ್ಲಿಂದ ಟಿಬೇಟಿಯನ್ ಕಾಲನಿಗೆ ಭೇಟಿ ನೀಡಿ ಕೇಂದ್ರಸ್ಥಾನಕ್ಕೆ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಮುಂಡಗೋಡ ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿ ಜತೆಗಿದ್ದರು.







