ಮೇ ಅಂತ್ಯದೊಳಗೆ ಶೌಚಾಲಯ ನಿರ್ಮಾಣ ಪೂರ್ಣಗೊಳಿಸಿ: ಜಿಪಂ ಸಿಇಒ ಚಾರುಲತಾ ಸೋಮಲ್
ಬಯಲು ಬಹಿರ್ದೆಸೆ ಮುಕ್ತ ಕೊಡಗು

ಮಡಿಕೇರಿ, ಎ.22: ಜಿಲ್ಲೆಯಲ್ಲಿ ಸುಮಾರು 2,500 ವೈಯಕ್ತಿಕ ಶೌಚಾ ಲಯ ನಿರ್ಮಾಣ ಮಾಡಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಅಗತ್ಯ ಸಹಕಾರ ನೀಡುವಂತೆ ಜಿಪಂ ಸಿಇಒ ಚಾರುಲತಾ ಸೋಮಲ್ ಸೂಚನೆ ನೀಡಿದ್ದಾರೆ.
ನಗರದ ಎಸ್‌ಜಿಎಸ್‌ವೈ ಕಟ್ಟಡ ಸಭಾಂಗಣದಲ್ಲಿ ಮಡಿಕೇರಿ ತಾಲೂಕು ಗ್ರಾಪಂಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಗ್ರಾಪಂ ನೋಡಲ್ ಅಧಿಕಾರಿಗಳು ಹಾಗೂ ಪಿಡಿಒಗಳಿಗೆ ಶುಕ್ರವಾರ ಏರ್ಪಡಿಸಿದ್ದ ಸ್ವಚ್ಛ ಭಾರತ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮಡಿಕೇರಿ ತಾಲೂಕಿನಲ್ಲಿ ಮೇ ಅಂತ್ಯದೊಳಗೆ ಶೌಚಾಲಯ ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಮಾಡಲು ಸಹಕರಿಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನವಿ ಮಾಡಿದರು. ತಾಲೂಕಿನ ಕುಂಜಿಲ ಕಕ್ಕಬ್ಬೆ ಗ್ರಾಪಂ ವ್ಯಾಪ್ತಿಯಲ್ಲಿ 50, ಬೇಂಗೂರು 11, ಗಾಳಿಬೀಡು 12, ಹೊದ್ದೂರು 9, ಕುಂದಚೇರಿ ಮತ್ತು ಮೇಕೇರಿ ಗ್ರಾಪಂಗಳಲ್ಲಿ ತಲಾ 5 ಶೌಚಾಲಯ ನಿರ್ಮಾಣಕ್ಕೆ ಬಾಕಿ ಇದೆ ಎಂದು ಸಿಇಒ ತಿಳಿಸಿದರು. ರಾಜ್ಯದಲ್ಲಿ ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಸಂಪೂರ್ಣ ಬಯಲು ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಎಲ್ಲ ರೀತಿಯ ತಯಾರಿ ನಡೆದಿದೆ. ಹಾಗೆಯೇ ಉಳಿದ 7 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಪ್ರಯತ್ನಗಳು ಮುಂದುವರಿದಿದ್ದು, ಅದರಲ್ಲಿ ಕೊಡಗು ಜಿಲ್ಲೆಯೂ ಸೇರಿದೆ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಪ್ರಯತ್ನಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಿಇಒ ಅವರು ನಿರ್ದೇಶನ ನೀಡಿದರು. ಶೌಚಾಲಯ ರಹಿತ ಕುಟುಂಬಗಳ ಸಮೀಕ್ಷೆ ಮಾಡಲು ಸಿಎಟಿ (ಕ್ಯಾಚ್‌ಮೆಂಟ್ ಏರಿಯಾ ಟೀಮ್) ಮಾದರಿಯ ಮೂರು ಜನರ ತಂಡವನ್ನು ರಚಿಸಲಾಗಿದೆ. ಅದರಂತೆ ಸಮಿತಿಯಲ್ಲಿ ವಾರ್ಡಿನ ಗ್ರಾಪಂ ಸದಸ್ಯರು, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಸ್ವಯಂ ಸೇವಕರು, ಆಸಕ್ತ ಕಾರ್ಯಕರ್ತರು ಇರುತ್ತಾರೆ. ಈ 3 ಜನರ ತಂಡವು ವಾರ್ಡಿನಲ್ಲಿ ಶೌಚಾಲಯ ಇಲ್ಲದ ಕುಟುಂಬಗಳನ್ನು ಎ, ಬಿ, ಸಿ, ಡಿ, ಇ, ಎಫ್ ಮಾದರಿಯಲ್ಲಿ ಸಮೀಕ್ಷೆ ಮಾಡಲಾಗುತ್ತದೆ ಎಂದು ಪವರ್ ಪಾಯಿಂಟ್ ಮೂಲಕ ಮಾಹಿತಿ ನೀಡಿದರು. ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ಯಾಚ್‌ಮೆಂಟ್ ಏರಿಯಾ ಅಪ್ರೋಚ್ ತಂಡ ರಚನೆ ಮಾಡಲಾಗಿದ್ದು, ಸಂಬಂಧಿಸಿದ ವಾರ್ಡ್ ಸದಸ್ಯರು, ವಾರ್ಡ್‌ಗೆ ಸಂಬಂಧಿಸಿದ ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತಿತರರನ್ನು ತೊಡಗಿಸಿಕೊಂಡು ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಜಿಪಂ ಸಿಇಒ ಚಾರುಲತಾ ಸೋಮಲ್ ಅವರು ತಿಳಿಸಿದರು. ಉಪಕಾರ್ಯದರ್ಶಿ ವಿಶ್ವನಾಥ ಪೂಜಾರಿ ಅವರು ಕೊಡಗು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡುವುದರ ಜೊತೆಗೆ ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಕೃಷಿ ತಾಂತ್ರಿಕ ಅಧಿಕಾರಿ ಗಿರೀಶ್, ತಾಲೂಕು ಸಮಾಜ ಕಲ್ಯಾಣಧಿಕಾರಿ ಚಿಕ್ಕಬಸವಯ್ಯ ಮತ್ತಿತರರು ಉಪಸ್ತಿತರಿದ್ದರು.





