ಭೂಕಬಳಿಕೆ ಆರೋಪ: ಇಸ್ಕಾನ್ ದೇವಸ್ಥಾನಕ್ಕೆ ನೋಟಿಸ್

ಬೆಂಗಳೂರು, ಎ. 22: ನಗರದ ಕಾಚರಕನಹಳ್ಳಿ ಕೆರೆ ಅಂಗಳದಲ್ಲಿ ಐದು ಎಕರೆ ಇಪ್ಪತ್ತು ಗುಂಟೆ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವ ಆರೋಪದಲ್ಲಿ ಇಸ್ಕಾನ್ ದೇವಸ್ಥಾನಕ್ಕೆ ರಾಜ್ಯ ಸರಕಾರ ನೋಟಿಸ್ ಜಾರಿ ಮಾಡಿದೆ ಎಂದು ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಮಂಗಳವಾರ ನಗರದ ವ್ಯಾಪ್ತಿಯಲ್ಲಿರುವ ಪ್ರಮುಖ ಕೆರೆಗಳಿಗೆ ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿಯು ಭೇಟಿ ನೀಡಿ ಒತ್ತುವರಿ ಜಾಗ, ತೆರವು ಜಾಗವನ್ನು ಪರಿಶೀಲನೆ ಮಾಡಿತು.
ಈ ಬಗ್ಗೆ ಮಾತನಾಡಿದ ಕೋಳಿವಾಡ, ನಗರದ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಕಾಚರಕನಹಳ್ಳಿ ಒಟ್ಟು 57.26 ಎಕರೆ ವಿಸ್ತೀರ್ಣ ಹೊಂದಿದ್ದು, ಅತ್ಯಂತ ವಿವಾದಿತ ಜಾಗ ಎಂಬ ಅಪಖ್ಯಾತಿಗೆ ಒಳಗಾಗಿದೆ. ಅಲ್ಲದೆ, ಕೆರೆ ಜಾಗವನ್ನು ಹಲವಾರು ಮಂದಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದ ಹೇಳಿದರು.
ಬೆಂಗಳೂರು ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಇಸ್ಕಾನ್ ದೇವಸ್ಥಾನ 5.20 ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಈ ವಿವಾದಿತ ಸ್ಥಳದಲ್ಲಿ ಮೂರ್ನಾಲ್ಕು ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಕಲ್ಯಾಣಮಂಟಪವನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಈ ವಿವಾದದ ಬಗ್ಗೆ ಈಗಾಗಲೇ ತಹಶೀಲ್ದಾರ್ ಅವರು ಇಸ್ಕಾನ್ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಮುಂದಿನ ಸಭೆಯಲ್ಲಿ ಈ ಒತ್ತುವರಿಯ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಾಚರಕನಹಳ್ಳಿ ಕೆರೆಯಲ್ಲಿ ಒಟ್ಟು 30ಜನ 33.18 ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿತ್ತು. ಇದುವರೆಗೆ 21 ಮಂದಿ ಪ್ರತ್ಯುತ್ತರ ನೀಡಿದ್ದಾರೆ. ಅಲ್ಲದೆ, ಈ ಕೆರೆಯಲ್ಲಿ ಬಿಡಿಎ 15.26 ಎಕರೆಯಲ್ಲಿ ರಸ್ತೆ ನಿರ್ಮಿಸಿದೆ. 1.17 ಎಕರೆಯಲ್ಲಿ ನಾಲೆಯಿದೆ. 3.35 ಎಕರೆಯಲ್ಲಿ ಇನ್ನೊಂದು ರಸ್ತೆಯಿದ್ದು, 1.22 ಮತ್ತು 1.02ಎಕರೆಯಲ್ಲಿ ಎರಡು ಪ್ರತ್ಯೇಕ ಕೊಳಚೆ ಪ್ರದೇಶ ಹಾಗೂ 1.15 ಎಕರೆಯಲ್ಲಿ ಚಂದ್ರಿಕಾ ಸೋಪ್ ಫ್ಯಾಕ್ಟರಿ, 17 ಕುಂಟೆಯಲ್ಲಿ ಶ್ರೀನಿವಾಸ್‌ಗೌಡ ಎಂಬವರ ಪೆಟ್ರೋಲ್ ಬಂಕ್ ಇದೆ. ಉಳಿದಂತೆ ವಿವಿಧ ವ್ಯಕ್ತಿಗಳು ಒಟ್ಟು 33.18 ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಸ್ಯಾಂಕಿಕೆರೆಗೆ ಸಮಿತಿ ಭೇಟಿ: ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಸ್ಯಾಂಕಿಕೆರೆ ಒಟ್ಟು 46.19 ಎಕರೆ ವಿಸ್ತೀರ್ಣ ಹೊಂದಿದೆ. ಆದರೆ, ಸುಮಾರು 4 ಎಕರೆ ಒತ್ತುವರಿಯಾಗಿದೆ. 37 ಗುಂಟೆಯಲ್ಲಿ ಅರಣ್ಯ ಇಲಾಖೆ ರಸ್ತೆ ನಿರ್ಮಿಸಿದೆ. 1.04 ಎಕರೆ ಖಾಸಗಿ ವ್ಯಕ್ತಿಗಳ ಸ್ವಾಧೀನದಲ್ಲಿದ್ದು, ತಮ್ಮ ಭೂಮಿ ಎಂದು ಪ್ರತಿಪಾದಿಸುತ್ತಿದ್ದಾರೆ. ಇದು, ಕೆರೆಯ ಜಾಗ ಎಂದು ತಕರಾರು ನಡೆಯುತ್ತಿದ್ದು, ನ್ಯಾಯಾಲಯದ ವಿಚಾರಣೆ ಬಾಕಿ ಇದೆ. 1.04 ಎಕರೆಯಲ್ಲಿ ಬಿಬಿಎಂಪಿ ಈಜು ಕೊಳ ನಿರ್ಮಿಸಿದೆ. 16 ಗುಂಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ನಿರ್ಮಾಣವಾಗಿದೆ. ಇನ್ನು 42.02 ಎಕರೆ ಜಾಗದಲ್ಲಿ ಕೆರೆಯಿದ್ದು, ಅದರಲ್ಲಿ ನೀರು ತುಂಬಿದೆ ಎಂದು ವಿವರಿಸಿದರು.
ಸಿಂಗನಾಯಕನಹಳ್ಳಿ: ಹಮಾನಿಕೆರೆ 121.36 ಎಕರೆಯಲ್ಲಿದ್ದು, 38 ಮಂದಿ 33.14 ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಬಹುತೇಕ ಇದು ಕಷಿ ಭೂಮಿಯಾಗಿದ್ದು, 20 ಎಕರೆ ಭೂಮಿಯನ್ನು ತೆರವುಗೊಳಿಸಲಾಗಿದೆ.
ಆವಲಹಳ್ಳಿ: ಸಿಂಗನಾಯಕನಹಳ್ಳಿ ಕೆರೆ ಒಟ್ಟು 13.11 ಎಕರೆ ಪ್ರದೇಶದಲ್ಲಿದೆ. ಇಲ್ಲಿ 36 ಗುಂಟೆ ಒತ್ತುವರಿಯಾಗಿದ್ದು, ಬಹುತೇಕ ತೆರವುಗೊಳಿಸಲಾಗಿದೆ. ರಮೇಶ್ ಎಂಬವರು ವಿಶ್ವವಿದ್ಯಾಪೀಠ ಶಾಲೆಗಾಗಿ 16ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದಾರೆ.
ಬೆಳ್ಳಂದೂರು ಕೆರೆ ಒಟ್ಟು 919 ಎಕರೆ ಪ್ರದೇಶದಲ್ಲಿದ್ದು, 23.35 ಎಕರೆ ಒತ್ತುವರಿಯಾಗಿದೆ. ಇದರಲ್ಲಿ ಬಹಳಷ್ಟು ಖಾಸಗಿ ವ್ಯಕ್ತಿಗಳಿದ್ದಾರೆ ಎಂದು ಹೇಳಿದರು. ಸಮಿತಿಯ ಸದಸ್ಯರಾದ ಗೋಪಾಲಯ್ಯ, ಎನ್.ಎ.ಹಾರಿಸ್, ಸುರೇಶ್‌ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಹಾಗೂ ಅಧಿಕಾರಿಗಳು ಸೇರಿ ಪರಿಶೀಲನೆಯಲ್ಲಿ ಹಾಜರಿದ್ದರು.





