ಸಂಘಪರಿವಾರದಿಂದ ಅಂಬೇಡ್ಕರ್ ದೈವೀಕರಿಸುವ ಕುತಂತ್ರ: ದಿನೇಶ್ ಅಮೀನ್‌ಮಟ್ಟು

ಬೆಂಗಳೂರು, ಎ. 22: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿರ್ಲಕ್ಷ, ವಿರೋಧದಿಂದ ಮಣಿಸಲಾಗದ ಬಿಜೆಪಿ ಮತ್ತು ಸಂಘಪರಿವಾರದವರು ಪ್ರೀತಿಸುವ ನಟನೆಯ ಮೂಲಕ ದೈವೀಕರಿಸುವ ಕುತಂತ್ರ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಆರೋಪಿಸಿದ್ದಾರೆ.
ಶುಕ್ರವಾರ ನಗರದ ಜಿಕೆವಿಕೆ ಆವರಣದ ಕುವೆಂಪು ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾಲಯ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್‌ರ ಬೆಳವಣಿಗೆ ಸಹಿಸದ ಕೆಲವರು ಅವರನ್ನು ನಿರ್ಲಕ್ಷದಿಂದ ಮುಗಿಸಲು ಪ್ರಯತ್ನಿಸಿದರು. ಆದರೂ ಅದು ಅಂಬೇಡ್ಕರ್‌ರಿಗೆ ಅಡ್ಡಗಾಲಾಗಲಿಲ್ಲ. ನಂತರ ಅಂಬೇಡ್ಕರ್‌ವಾದವನ್ನು ವಿರೋಧಿಸಿ ಕೈ ಸುಟ್ಟುಕೊಂಡರು. ಆದರೆ ಸದ್ಯ ಅಂಬೇಡ್ಕರ್‌ರನ್ನು ಪ್ರೀತಿ ಮಾಡುವ, ಸಿದ್ಧಾಂತಗಳನ್ನು ಒಪ್ಪಿಕೊಳ್ಳುವ ನಟನೆ ಮಾಡುತ್ತಿದ್ದಾರೆ. ಆ ಮೂಲಕ ಅವರನ್ನು ದೈವೀಕರಿಸಿ ಪೂಜಾ ಮೂರ್ತಿ ಮಾಡಿ ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಮಾಜ ಸುಧಾರಕ ಮತ್ತು ವಚನಕಾರ ಬಸವಣ್ಣನವರನ್ನು ಪೂಜಾ ಮೂರ್ತಿ ಮಾಡುವ ಮೂಲಕ ಅವರನ್ನು ಮೂಲೆಗುಂಪು ಮಾಡಿದರು. ಇದೇ ರೀತಿಯಲ್ಲಿ ಅಂಬೇಡ್ಕರ್‌ರನ್ನು ಮತ್ತು ಅವರ ಸಿದ್ಧಾಂತಗಳನ್ನು ನಾಶ ಮಾಡಲು ಅವರ ಮೇಲೆ ಪ್ರೀತಿ, ಮಮಕಾರವನ್ನು ತೋರಿಸುತ್ತಿದ್ದಾರೆ. ಈ ಪ್ರೀತಿಯ ಮರ್ಮದ ಕುರಿತು ಜನರು ಎಚ್ಚರಿಕೆಯಂದಿರಬೇಕು ಎಂದು ಹೇಳಿದರು.
ಹಿಂದುತ್ವ ರಾಜಕಾರಣಕ್ಕೆ ಅವಧಿ ಮುಗಿದಿರುವುದರಿಂದ ಹಿಂದುತ್ವದ ಬಗ್ಗೆ ಮಾತನಾಡುವುದನ್ನು ಬಿಟ್ಟು ಇಂದು ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಬಗ್ಗೆ ರಾಜಕಾರಣ ಮಾಡುತ್ತಿದ್ದಾರೆ. ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗದೇ ಇರುವವರನ್ನು ದೇಶದ್ರೋಹಿಗಳೆಂದು ಕರೆಯುವ ಸಂಘಪರಿವಾರದವರಿಗೆ, ಅಪ್ಪಟ ದೇಶ ಪ್ರೇಮಿ ಎಂದು ಗುರುತಿಸಿಕೊಂಡಿದ್ದ ಅಂಬೇಡ್ಕರ್‌ರನ್ನು ಇತ್ತೀಚೆಗೆ ಕೆಲವರು ‘ಈಡಿಯಟ್’ ಎಂದು ಕರೆದರೂ ಸುಮ್ಮನಿರುವುದೇಕೆ ಎಂದು ಪ್ರಶ್ನೆ ಮಾಡಿದರು. ಸ್ವಾತಂತ್ರ ಬಂದು 68 ವರ್ಷಗಳೇ ಕಳೆದರು ಅಂಬೇಡ್ಕರ್ ಬಯಸಿದ ಸಂವಿಧಾನ ಜಾರಿಯಾಗಿಲ್ಲ್ಲ. ಈ ಪರಿಣಾಮ ಪ್ರತಿದಿನ ದಲಿತರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಕೇವಲ ಭಾಷಣ, ಸ್ಮಾರಕಗಳ ನಿರ್ಮಾಣ ಮಾಡಿದರೆ ಅಂಬೇಡ್ಕರ್ ಸಿದ್ಧಾಂತಗಳು ರಕ್ಷಣೆಯಾಗುವುದಿಲ್ಲ. ಬದಲಾಗಿ ಅಂಬೇಡ್ಕರ್ ಆಶಯಗಳು ಸಾಕಾರಗೊಳಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಭಾರತವನ್ನು ಜಾತೀಯತೆಯಿಂದ ಹೊರತಂದು ಪುನರ್ ನಿರ್ಮಾಣ ಮಾಡಬೇಕು ಎಂದು ಅಂಬೇಡ್ಕರ್ ಕನಸು ಕಂಡಿದ್ದರು. ಸಂವಿಧಾನ ಆಶಯಗಳು ಜಾರಿಯಾಗುವ ಸ್ಥಳದಲ್ಲಿ ಸಂವಿಧಾನ ವಿರೋಧಿಗಳು ಕುಳಿತಿದ್ದಾರೆ. ಹೀಗಾಗಿ ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ತತ್ವ ಮತ್ತು ಸಿದ್ಧಾಂತಗಳನ್ನು ಇಂದು ಇಡೀ ವಿಶ್ವವೇ ಕೊಂಡಾಡುತ್ತಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಅಂಬೇಡ್ಕರ್ ಜಯಂತಿಯನ್ನು ವಿಶ್ವ ಸಂಸ್ಥೆ ಆಚರಣೆ ಮಾಡಿದೆ. ಅಂಬೇಡ್ಕರ್ 125 ಕೋಟಿ ಭಾರತೀಯರ ಹಕ್ಕುಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಗುಣಗಾನ ಮಾಡಿದ್ದಾರೆ. ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕನಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಈ ವೇಳೆ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಕುಲಪತಿ ಡಾ.ಎಚ್.ಶಿವಣ್ಣ, ಪ.ಜಾ.ಪ.ಪಂ. ಘಟಕದ ನಿರ್ದೇಶಕ ಡಾ.ಆರ್.ಎನ್. ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಹಿಂದುತ್ವ ರಾಜಕಾರಣಕ್ಕೆ ಅವಧಿ ಮುಗಿದಿರುವುದರಿಂದ ಹಿಂದುತ್ವದ ಬಗ್ಗೆ ಮಾತನಾಡುವುದನ್ನು ಬಿಟ್ಟು ಇಂದು ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಬಗ್ಗೆ ರಾಜಕಾರಣ ಮಾಡುತ್ತಿದ್ದಾರೆ. ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗದೇ ಇರುವವರನ್ನು ದೇಶದ್ರೋಹಿಗಳೆಂದು ಕರೆಯುವ ಸಂಘಪರಿವಾರದವರಿಗೆ, ಅಪ್ಪಟ ದೇಶ ಪ್ರೇಮಿ ಎಂದು ಗುರುತಿಸಿಕೊಂಡಿದ್ದ ಅಂಬೇಡ್ಕರ್‌ರನ್ನು ಇತ್ತೀಚೆಗೆ ಕೆಲವರು ‘ಈಡಿಯಟ್’ ಎಂದು ಕರೆದರೂ ಸುಮ್ಮನಿರುವುದೇಕೆ?
-ದಿನೇಶ್ ಅಮೀನ್‌ಮಟ್ಟು, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ







