ಆನಂದ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ: ರೋಷನ್‌ಬೇಗ್
ಬೆಂಗಳೂರು, ಎ. 22: ಆತ್ಮಹತ್ಯೆಗೆ ಯತ್ನಿಸಿ ಸಾವಿಗೆ ಶರಣಾಗಿರುವ ಚಿಕ್ಕಬಳ್ಳಾಪುರ ಮೂಲದ ರೈತ ಆನಂದ್‌ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ 2 ಎಕರೆ ಜಮೀನು ನೀಡಲು ಸರಕಾರ ತೀರ್ಮಾನಿಸಿದೆ ಎಂದು ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್‌ಬೇಗ್ ಹೇಳಿದ್ದಾರೆ.
ಶುಕ್ರವಾರ ಖಾಸಗಿ ಹೊಟೇಲ್‌ವೊಂದರಲ್ಲಿ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ‘ರಫ್ತುದಾರರ ಹಾಗೂ ಮಾವು ಬೆಳೆಗಾರರ ಒಂದು ದಿನದ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಆನಂದ್‌ಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರಿಗೆ ತುರ್ತು ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದು ನಮಗೂ ನೋವಿದ್ದು, ರಾಜ್ಯ ಸರಕಾರವು ವಿಶೇಷ ಪ್ರಕರಣವೆಂದು ಪರಿಗಣಿಸಿ ನೊಂದ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ 2 ಎಕರೆ ಜಮೀನು ನೀಡಲಿದೆ ಎಂದು ಹೇಳಿದರು. ಜಮೀನು ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಗೊಂದಲವಿದ್ದರು ತಕ್ಷಣ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಅಲ್ಲದೆ, ಇಬ್ಬರು ಸಣ್ಣ ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರ ಉಂಟಾಗಿದೆ ಎಂದು ತಿಳಿಸಿದರು.





