ರಾಜ್ಯ ಸರಕಾರ ಅಸ್ಥಿರಕ್ಕೆ ಬಿಜೆಪಿ ಹುನ್ನಾರ: ಉಗ್ರಪ್ಪ ಆರೋಪ

ಬೆಂಗಳೂರು, ಎ. 22: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮೇಲ್ಮನೆ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರಖಂಡದ ಆಡಳಿತಾರೂಢ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಿ, ರಾಷ್ಟ್ರಪತಿ ಆಡಳಿತ ಹೇರಿದ್ದ ಕೇಂದ್ರ ಸರಕಾರಕ್ಕೆ ಉ.ಖಂಡ ಹೈಕೋರ್ಟ್ ಕಪಾಳ ಮೋಕ್ಷ ಮಾಡಿದೆ. ಆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಜನತೆಯ ಕ್ಷಮೆಕೋರಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿ 2008ರಲ್ಲಿ ‘ಆಪರೇಷನ್ ಕಮಲ’ ನಡೆಸಿದ ರೀತಿಯಲ್ಲಿಯೆ ಉತ್ತರಾಖಂಡದಲ್ಲಿಯೂ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದೆ ಎಂದು ದೂರಿದ ಅವರು, ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಉತ್ತರಾಖಂಡ ರಾಜ್ಯದಲ್ಲಿ ರಾಷ್ಟಪತಿ ಆಡಳಿತ ಹೇರಿದೆ ಎಂದು ಟೀಕಿಸಿದರು.
ಒಂದೇ ನಾಣ್ಯದ ಭಿನ್ನಮುಖ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಇಬ್ಬರೂ ಒಂದೇ ನಾಣ್ಯದ ಎರಡು ಮುಖ. ಇವರಿಬ್ಬರಿಗೂ ಯಜಮಾನಿಕೆ, ಅಧಿಕಾರದಾಹ, ವಿರೋಧಿಗಳನ್ನು ವಾಮಮಾರ್ಗದಿಂದ ನಾಶ ಮಾಡುವ ಪ್ರವೃತಿಯಿದ್ದು, ಭ್ರಷ್ಟಾಚಾರದಲ್ಲಿ ನಿಸ್ಸೀಮರು ಎಂದು ಉಗ್ರಪ್ಪ ಲೇವಡಿ ಮಾಡಿದರು.
ಅಕ್ರಮ ಗಣಿಗಾರಿಕೆಯಿಂದ ಬಿಎಸ್‌ವೈ ಕೋಟ್ಯಂತರ ರೂ.ಭ್ರಷ್ಟಾಚಾರ ನಡೆಸಿದ್ದು, ಮೋದಿ 1800 ಕೋಟಿ ರೂ. ಅವ್ಯವಹಾರ ನಡೆಸಿದ ಲಲಿತ್‌ಮೋದಿಗೆ ಬೆಂಬಲ ನೀಡಿರುವುದು ಸ್ಪಷ್ಟ ಎಂದ ಅವರು, ಬಿಎಸ್‌ವೈಗೆ ಮೋದಿ ಮಾದರಿಯಾದರೆ, ಮೋದಿಗೆ ಬಿಎಸ್‌ವೈ ಮಾದರಿಯಾಗಿದ್ದಾರೆಂದು ವ್ಯಂಗ್ಯವಾಡಿದರು.







