ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೇಂದ್ರದ ಪ್ರಶಸ್ತಿಯ ಗರಿ
ಬೆಂಗಳೂರು, ಎ.22: ರಾಷ್ಟ್ರೀಯ ಪಂಚಾಯತ್ ದಿವಸ್ ಅಂಗವಾಗಿ ಕೇಂದ್ರ ಸರಕಾರವು ನೀಡುವ ರಾಷ್ಟ್ರೀಯ ಪುರಸ್ಕಾರಕ್ಕೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಭಾಜನವಾಗಿದೆ.
ರಾಷ್ಟ್ರೀಯ ಪುರಸ್ಕಾರಗಳಲ್ಲಿ ಒಟ್ಟು ಎರಡು ಪುರಸ್ಕಾರಗಳನ್ನು ಪಡೆದಿರುವ ರಾಜ್ಯ ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಹಣಕಾಸು ಹಂಚಿಕೆಯಲ್ಲಿ ಮೂರನೆ ಪ್ರಶಸ್ತಿ ಪಡೆದಿದೆ. ಗ್ರಾಮೀಣ ಸಂಪರ್ಕ ಸಾಧನದಲ್ಲಿ ಗ್ರಾಮ ಪಂಚಾಯತ್‌ಗಳಿಗೆ ವಿದ್ಯುನ್ಮಾನ ಸಂಪರ್ಕ ಮತ್ತು ಸಂವಹನಗಳಲ್ಲಿ ಮೊದಲ ಸ್ಥಾನ ಪಡೆದಿದೆ. ರಾಷ್ಟ್ರೀಯ ಪಂಚಾಯತ್‌ರಾಜ್ ದಿವಸದ ಅಂಗವಾಗಿ ಜಾರ್ಖಂಡ್‌ರಾಜ್ಯದ ಜಮ್‌ಶೆಡ್‌ಪುರದಲ್ಲಿ ಎ.24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕದೇವಿ ಹಾಗೂ ರಾಜ್ಯದ ವಿವಿಧ ಪ್ರಶಸ್ತಿ ಪುರಸ್ಕೃತ 120 ಜನರ ನಿಯೋಗ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದೆ. ಅಲ್ಲದೆ, ರಾಜ್ಯದ 11 ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಪಂಚಾಯತ್ ಸಶಕ್ತಿಕರಣ ಪುರಸ್ಕಾರ ದೊರೆತಿದೆ. ಒಂದು ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ ದೊರೆತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಂಡಿಕಾ ಗ್ರಾಮ ಪಂಚಾಯತ್‌ಗೆ ಗ್ರಾಮಸಭಾ ಪುರಸ್ಕಾರ ದೊರೆತಿದೆ.
ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ, ಕಣ್ಣೂರು ಮತ್ತು ಸಿಗೇಹಳ್ಳಿ ಗ್ರಾಮ ಪಂಚಾಯತ್‌ಗಳಿಗೆ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತ್‌ಗೆ ಪಂಚಾಯತ್ ಸಶಕ್ತಿಕರಣ ಪುರಸ್ಕಾರ ದೊರೆತಿದೆ. ಗುಲ್ಬರ್ಗ ಜಿಲ್ಲೆಯ ಅಫ್ಝಲ್‌ಪುರ ಮತ್ತು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಪಂಚಾಯತ್‌ಗಳಿಗೆ ಮತ್ತು ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ಗೆ ಸಶಕ್ತಿಕರಣ ಪ್ರಶಸ್ತಿ ಲಭ್ಯವಾಗಿದೆ.
ಪಂಚಾಯತ್ ಸಶಕ್ತಿಕರಣ ಪ್ರಶಸ್ತಿಯನ್ನು ಆಯಾ ಪಂಚಾಯತ್‌ರಾಜ್ ಸಂಸ್ಥೆಗಳ ಸಮಗ್ರ ಪ್ರಗತಿಯನ್ನಾಧರಿಸಿ ಅಂದರೆ ಸ್ವಂತ ಸಂಪನ್ಮೂಲ ಕ್ರೋಡೀಕರಣ, ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ದಾಖಲೆಗಳ ನಿರ್ವಹಣೆ, ಮೂಲ ಸೌಕರ್ಯಗಳ ಒದಗಿಸುವಿಕೆ ಮತ್ತು 29 ಇಲಾಖಾ ವಿಷಯಗಳ ನಿರ್ವಹಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಸೂಚ್ಯಂಕದ ಆಧಾರದ ಮೇಲೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರವನ್ನು ಪರಿಣಾಮಕಾರಿ ಗ್ರಾಮಸಭೆಗೆ ಆಯೋಜನೆಗೆ ನೀಡಲಾಗುತ್ತದೆ. ಹೀಗೆ ಕರ್ನಾಟಕವು ಪಂಚಾಯತ್‌ರಾಜ್ ಸಂಸ್ಥೆಗಳ ಎಲ್ಲ ವಲಯಗಳಲ್ಲೂ ಮೊದಲ 3 ಪ್ರಶಸ್ತಿಗಳಲ್ಲಿ ಒಂದನ್ನು ತನ್ನದಾಗಿಸಿ ಕೊಂಡು ಕೀರ್ತಿ ಪಾತ್ರವಾಗಿದೆ ಎಂದು ಪ್ರಕಟನೆ ತಿಳಿಸಿದೆ.







