ಕರ್ನಾಟಕ ಸಹಿತ ಮೂರು ರಾಜ್ಯಗಳಿಗೆ ರೂ.842 ಕೋಟಿ
ಪ್ರಕೃತಿ ವಿಕೋಪ
ಹೊಸದಿಲ್ಲಿ, ಎ.22: ಬರಗಾಲ ಅಥವಾ ನೆರೆಯಿಂದ ಬಾಧಿತವಾಗಿರುವ ಕರ್ನಾಟಕ, ಪುದುಚೇರಿ ಹಾಗೂ ಅರುಣಾಚಲಪ್ರದೇಶಗಳಿಗೆ ರೂ.842.7 ಕೋಟಿಯ ಸಹಾಯವನ್ನು ಕೇಂದ್ರ ಸರಕಾರವಿಂದು ಮಂಜೂರು ಮಾಡಿದೆ.
ಗೃಹ ಸಚಿವ ರಾಜನಾಥ್ ಸಿಂಗ್‌ರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯೊಂದರಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ.
ಬರ ಪೀಡಿತ ಕರ್ನಾಟಕ ಹಾಗೂ ಪ್ರವಾಹ ಪೀಡಿತ ಪುದುಚೇರಿ ಮತ್ತು ಅರುಣಾಚಲಪ್ರದೇಶಗಳಿಗೆ ಭೇಟಿ ನೀಟಿದ್ದ ಕೇಂದ್ರದ ಸಮಿತಿಯ ವರದಿಯ ಆಧಾರದಲ್ಲಿ ಸಮಿತಿಯ ಪ್ರಸ್ತಾವಗಳನ್ನು ಪರಿಶೀಲಿಸಿದೆ.
ಕರ್ನಾಟಕಕ್ಕೆ ರೂ.723.23 ಕೋಟಿ, ಪುದುಚೇರಿಗೆ ರೂ.35.14 ಕೋಟಿ ಹಾಗೂ ಅರುಣಾಚಲ ಪ್ರದೇಶಕ್ಕೆ ರೂ.84.33 ಕೋಟಿ ಸಹಾಯವನ್ನು ಮಂಜೂರು ಮಾಡಲಾಗಿದೆ.
ಅರುಣಾಚಲಪ್ರದೇಶಕ್ಕೆ ನೀಡಿರುವ ರೂ.84.33 ಕೋಟಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯನ್ವಯದ ರೂ.18 ಕೋಟಿ ಸಹ ಸೇರಿದೆ.
ಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ, ಕೃಷಿ ಸಚಿವ ರಾಧಾಮೋಹನ್ ಸಿಂಗ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ ಮಹರ್ಷಿ ಹಾಗೂ ಗೃಹ ವಿತ್ತ ಹಾಗೂ ಕೃಷಿ ಸಚಿವಾಲಯಗಳ ಹಿರಿಯಧಿಕಾರಿಗಳು ಹಾಜರಿದ್ದರು.





