ಕೇಂದ್ರದ ನಿರ್ಧಾರ ಕಸದ ಬುಟ್ಟಿಗೆ: ಶಿವಸೇನೆ
ಉತ್ತರಾಖಂಡ ವಿವಾದ
ಮುಂಬೈ, ಎ.22: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಕೇಂದ್ರ ಸರಕಾರದ ನಿರ್ಧಾರ ‘ಕಸದ ಬುಟ್ಟಿಗೆ ಎಸೆಯಲಾಗಿದೆ’ ಹಾಗೂ ಕೇಂದ್ರ ಸ್ವತಃ ಬೆತ್ತಲಾಗಿದೆಯೆಂದು ಎನ್‌ಡಿಎಯ ಪ್ರಧಾನ ಮಿತ್ರ ಶಿವಸೇನೆ ಟೀಕಿಸಿದೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ರದ್ದುಪಡಿಸಿ ಉತ್ತರಾಖಂಡ ಹೈಕೋರ್ಟ್ ನಿನ್ನೆ ನೀಡಿದ ಆದೇಶದಿಂದ ನರೇಂದ್ರ ಮೋದಿ ಸರಕಾರಕ್ಕೆ ಮುಖಭಂಗವಾಗಿದೆ.
ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರವನ್ನು ಪುನಃ ಸ್ಥಾಪಿಸುವ ಮಹತ್ತ್ವದ ತೀರ್ಪನ್ನು ಸ್ವಾಗತಿಸಿರುವ ಶಿವಸೇನೆ, ಅದರಿಂದ ರಾಷ್ಟ್ರಪತಿಯ ಹುದ್ದೆಗೂ ಕೊರತೆ ಬಂದಿದೆಯೆಂದು ಹೇಳಿದೆ.
ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಕೇಂದ್ರದ ನಿರ್ಧಾರವನ್ನು ನ್ಯಾಯಾಂಗವು ಕಸದ ಬುಟ್ಟಿಗೆಸೆದಿದೆ. ರಾಷ್ಟ್ರಪತಿ ತನ್ನ ಶಿಫಾರಸನ್ನು ಅಂಗೀಕರಿಸಿದ್ದಾರೆಂಬ ಸರಕಾರದ ನಿಲುವಿಗೂ ಈ ತೀರ್ಪು ನಿರ್ಲಕ್ಷಿಸಿದೆಯೆಂದು ಅದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯವೊಂದರಲ್ಲಿ ಟೀಕಿಸಿದೆ.
ರಾಷ್ಟ್ರಪತಿಯೂ ತಪ್ಪು ಮಾಡಬಹುದೆಂದು ನ್ಯಾಯಾಲಯ ಹೇಳಿದುದರ ಅರ್ಥ, ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಮೋದಿ ಸರಕಾರ ತಪ್ಪು ಮಾಡಿದೆಯೆಂಬುದಾಗಿದೆ. ಮೋದಿ ಸರಕಾರ ರಾಷ್ಟ್ರಪತಿ ಹುದ್ದೆಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಲು ಯತ್ನಿಸಿತು. ಆದರೆ, ನ್ಯಾಯಾಲಯ ಹಾಗೆ ಮಾಡದಂತೆ ತಡೆಯಿತು. ಅದರಿಂದಾಗಿ ಕೇಂದ್ರವು ಸ್ವತಃ ಬೆತ್ತಲಾದುದು ಮಾತ್ರವಲ್ಲದೆ, ರಾಷ್ಟ್ರಪತಿ ಹುದ್ದೆಗೂ ಕಳಂಕ ತಂದಿತೆಂದು ಸಂಪಾದಕೀಯ ಆರೋಪಿಸಿದೆ.
ಪ್ರಜಾಸತ್ತಾತ್ಮಕ ದೃಷ್ಟಿಯಿಂದ ತೀರ್ಪು ಸ್ವಾಗತಾರ್ಹವೆಂದು ಅದು ಹೇಳಿದೆ.





