ಮುಂಬೈ ರೈಲ್ವೆಗೆ ರೂ.40 ಸಾವಿರ ಕೋಟಿ ರೂ. ಹೂಡಿಕೆ: ಪ್ರಭು

ಮುಂಬೈ, ಎ.22: ರೈಲ್ವೆ ಸಚಿವಾಲಯವು ಮುಂಬೈಯಲ್ಲಿ ವಿವಿಧ ಯೋಜನೆಗಳಿಗಾಗಿ ರೂ.40 ಸಾವಿರ ಕೋಟಿ ಹೂಡಲು ಯೋಜನೆ ರೂಪಿಸಿದೆ. ಅದರ ನೀಲನಕ್ಷೆ ಆ.15ರ ಮೊದಲು ಸಿದ್ಧವಾಗಲಿದೆಯೆಂದು ರೈಲ್ವೆ ಸಚಿವ ಸುರೇಶ್ ಪ್ರಭು ಇಂದಿಲ್ಲಿ ಹೇಳಿದ್ದಾರೆ.
‘‘ನಾನು ಈ ನಗರಕ್ಕೆ ಸೇರಿದವನು. ಯಾವುದನ್ನು ಮಾಡುವ ಅಗತ್ಯವಿದೆಯೋ ಅಷ್ಟೇ ಧಾರಳ ನಿಗಾವನ್ನು ಮುಂಬೈಗೆ ನಿಡಬೇಕೆಂಬುದು ನನಗೆ ಮಾತ್ರವಲ್ಲದೆ ನನ್ನ ಎಲ್ಲ ಸಹೋದ್ಯೋಗಿಗಳಿಗೂ ತಿಳಿದಿದೆ ’’ಎಂದು ಉಪನಗರ ಖಾರ್ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆಯೊಂದರ ಅಡಿಗಲ್ಲು ಸಮಾರಂಭದಲ್ಲಿ ಅವರು ತಿಳಿಸಿದರು.
‘‘ಈ ಸಂಬಂಧ ನಾನು ಇತ್ತೀಚೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರೊಂದಿಗೆ ಸಭೆಯೊಂದನ್ನು ನಡೆಸಿದ್ದೇನೆ’’ ಎಂದು ಪ್ರಭು ಹೇಳಿದರು.
‘‘ನಾನು ಮುಖ್ಯಮಂತ್ರಿ, ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಇತರ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆಯೊಂದನ್ನು ನಡೆಸಿದ್ದೇನೆ. ನಾವು ರೂ.40 ಸಾವಿರ ಕೋಟಿ ಹೂಡಿಕೆಯ ಯೋಜನೆಯೊಂದನ್ನು ರೂಪಿಸಿದ್ದೇವೆ. ಅದರ ನೀಲನಕ್ಷೆಯ ಆ.15ಕ್ಕೆ ಮೊದಲು ಸಿದ್ಧಗೊಳ್ಳಲಿದೆ’’ ಎಂದು ಅವರು ತಿಳಿಸಿದರು.
ಛತ್ರಪತಿ ಶಿವಾಜಿ ಟರ್ಮಿನಸ್ ಹಾಗೂ ಪನ್ವೇಲ್, ಎತ್ತರಿಸಿದ ಮಾರ್ಗದಂತಹ ಕೆಲವು ದೊಡ್ಡ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದಲ್ಲಿ ನಡೆಯಲಿವೆ. ಚರ್ಚ್‌ಗೇಟ್-ವಿರಾರ್ ಎತ್ತರಿಸಿದ ಮಾರ್ಗ ಯೋಜನೆಯ ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ನಿಗದಿತ ಸಮಯದೊಳಗೆ ಕಾಮಗಾರಿ ನಡೆಸುವಂತೆ ತಾನು ಹಿರಿಯಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ಅಡಚಣೆ ಬಂದಲ್ಲಿ ತಾನೇ ಸ್ವತಃ ಗಮನ ಹರಿಸುತ್ತೇನೆಂದು ಪ್ರಭು ಹೇಳಿದರು.
ಭಾರತೀಯ ರೈಲ್ವೆಯನ್ನು ವಿಶ್ವದರ್ಜೆಯ ಸಾರಿಗೆ ಮಾಧ್ಯಮವನ್ನಾಗಿ ರೂಪಿಸುವ ತನ್ನ ಆದ್ಯತೆಯ ಕುರಿತು ತಿಳಿಸಿದ ಅವರು, ಹಿಂದಿನ ಯಾವುದೇ ಸರಕಾರ ಆಡಳಿತದ ಮೊದಲಿನೆರಡು ವರ್ಷಗಳಲ್ಲಿ ಹೂಡದಷ್ಟು ಹಣವನ್ನು ಕೆಲವು ಬಜೆಟ್‌ಗೆ ಹೊರತಾದ ಸಂಪನ್ಮೂಲಗಳಿಂದ ಹೂಡಿದ್ದೇವೆ ಎಂದರು.
ರೂ.2.30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಲೆ ಪಾರ್ಲೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯನ್ನು ಸಚಿವರು ಆ ಬಳಿಕ ಉದ್ಘಾಟಿಸಿದರು.
ಸಮಾರಂಭದಲ್ಲಿ ಸಂಸದೆ ಪೂನಂ ಮಹಾಜನ್, ಶಾಸಕ ಪರಾಗ್ ಅಲವಾನಿ, ಮುಂಬೈ ಮೇಯರ್ ಸ್ನೇಹಲ್ ಅಂಬೇಕರ್, ಶಾಸಕ ಆಸಿಫ್ ಶೇಲಾರ್ ಹಾಗೂ ರೈಲ್ವೆಯ ಹಿರಿಯಧಿಕಾರಿಗಳು ಉಪಸ್ಥಿತರಿದ್ದರು.







