ಶಂಕಿತ ಉಗ್ರ ಪುರೋಹಿತ್ ವಿರುದ್ಧದ ಪ್ರಕರಣ ದುರ್ಬಲಗೊಳ್ಳುತ್ತಿದೆಯೆ?
2008 ಮಾಲೆಗಾಂವ್ ಸ್ಫೋಟ

ಹೊಸದಿಲ್ಲಿ, ಎ.22: ಕೇಸರಿ ಭಯೋತ್ಪಾದಕರ ವಿರುದ್ಧ ಎನ್‌ಐಎ ಮೃದು ನೀತಿ ತಳೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಸಂದರ್ಭದಲ್ಲೇ, ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ ಪುರೋಹಿತ್‌ನ ಮೇಲಿರುವ ಭಯೋತ್ಪಾದನಾ ಆರೋಪವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಮಾಲೆಂಗಾವ್‌ನಲ್ಲಿ 2008ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಪುರೋಹಿತ್ ಒಳಗೊಂಡಿದ್ದಾನೆ ಎಂದು ಹೇಳಿಕೆ ನೀಡಿದ್ದ ಸಾಕ್ಷಿಗಳೆಲ್ಲ ಇದೀಗ ತಮ್ಮ ಹೇಳಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. 2008ರ ಸೆ.29ರಂದು ಮೋಟಾರ್ ಸೈಕಲೊಂದರಲ್ಲಿರಿಸಿದ್ದ ಎರಡು ಬಾಂಬ್‌ಗಳು ಸ್ಫೋಟಿಸಿ 7 ಮಂದಿ ಸಾವನ್ನಪ್ಪಿದ್ದರು. ಕ.ಪುರೋಹಿತ್‌ರನ್ನು ಇತರ ಕೆಲವರೊಂದಿಗೆ ಬಂಧಿಸಲಾಗಿತ್ತು. ಸಂಘಪರಿವಾದ ಗುಂಪಿನ ಭಾಗವಾಗಿ ಸ್ಫೋಟದ ಪಿತೂರಿ ನಡೆಸಿದ್ದ ಆರೋಪವನ್ನು ಆತನ ಮೇಲೆ ಹೊರಿಸಲಾಗಿತ್ತು.
ಪ್ರಕರಣವನ್ನು, ಕರ್ನಲ್ ಪುರೋಹಿತ್ ಹಾಗೂ ಇತರರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ತಮ್ಮನ್ನು ಬಲಾತ್ಕರಿಸಲಾಗಿತ್ತೆಂದು ಇಬ್ಬರು ಸಾಕ್ಷಿಗಳು ಯೂಟರ್ನ್ ಹೊಡೆದಿದ್ದಾರೆ ಎಂದು ಎನ್‌ಡಿವಿ ವರದಿ ಮಾಡಿದೆ. ಪ್ರಕರಣದ ಸಂಬಂಧ ಅಭಿನವ ಭಾರತ್ ಸಂಘಟನೆಯ ಸದಸ್ಯರ ಬಂಧನವಾದೊಡನೆಯೇ 2008ರಲ್ಲಿ ಮುಂಬೈಯ ಭಯೋತ್ಪಾದನೆ ವಿರೋಧಿ ದಳದ(ಎಟಿಎಸ್) ಮುಂದೆ ನೀಡಿದ್ದ ಹೇಳಿಕೆಯಿಂದ ಯಶ್ಪಾಲ್ ಭದಾನಾ ಹಾಗೂ ಡಾ.ಆರ್.ಪಿ.ಸಿಂಗ್‌ಎಂಬವರು ಹಿಂದೆ ಸರಿದಿದ್ದಾರೆ.
ಫರಿದಾಬಾದ್ ಹಾಗೂ ಭೋಪಾಲ್‌ಗಳಲ್ಲಿ ನಡೆದಿದ್ದ ಅಭಿನವ ಭಾರತ್‌ನ ಸಭೆಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಅಥವಾ ಜನರನ್ನು ಕೊಲ್ಲುವ ಅಥವಾ ದಂಗೆಯೆಬ್ಬಿಸುವ ಬಗ್ಗೆ ತನ್ನ ಮುಂದೆ ಯಾರೂ ಮಾತನಾಡಿರಲಿಲ್ಲ. ಇದನ್ನು ತಾನು ಮೊದಲಿನ ಹೇಳಿಕೆಗಳಲ್ಲಿ ಎಂದೂ ಹೇಳಿದುದೇ ಇಲ್ಲವೆಂದು ವೈದ್ಯರಾಗಿರುವ ಡಾ.ಆರ್.ಪಿ.ಸಿಂಗ್ ಈ ತಿಂಗಳು ದಿಲ್ಲಿಯ ಪಟಿಯಲಾ ಹೌಸ್ ಕೋರ್ಟ್‌ನಲ್ಲಿ ಮ್ಯಾಜಿಸ್ಟ್ರೇಟರೊಬ್ಬರ ಮುಂದೆ ಹೇಳಿದ್ದಾರೆ.
ಲೆ.ಕ.ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಸ್ವಾಮಿ ಅಸೀಮಾನಂದ, 2008ರ ಎಪ್ರಿಲ್‌ನಲ್ಲಿ ಭೋಪಾಲದಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಚರ್ಚಿಸಿದ್ದರೆಂದು ಈ ಹಿಂದೆ ಡಾ.ಸಿಂಗ್ ಹೇಳಿದ್ದರೆಂದು ಎಟಿಎಸ್ ಆರೋಪಿಸುತ್ತಿದೆ.
ಭಯೋತ್ಪಾದನಾ ಪಿತೂರಿ ನಡೆಸಲಾಗಿದ್ದ ಸಭೆಯೊಂದರಲ್ಲಿ ತಾನು ಭಾಗವಹಿಸಿದ್ದೆನೆಂಬುದನ್ನು ಯಶ್ಪಾಲ್ ಭದಾನಾ ಸಹ ನಿರಾಕರಿಸಿದ್ದಾರೆ. ಪುರೋಹಿತ್ ಹಾಗೂ ಇತರರ ವಿರುದ್ಧ ಹೇಳಿಕೆ ನೀಡದಿದ್ದಲ್ಲಿ ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗುವುದೆಂದು ತನ್ನನ್ನು ಬೆದರಿಸಲಾಗಿತ್ತೆಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಸಭೆಗಳಲ್ಲಿ ಸ್ವಾಮಿ ಅಸೀಮಾನಂದ ‘ಬಾಂಬ್‌ನ ವಿರುದ್ಧ ಬಾಂಬ್’ ಎಂಬ ಕುರಿತು ಮಾತನಾಡಿದ್ದರೆಂದು ಹೇಳಿದುದೇ ಯಶ್ಪಾಲ್ ಭದಾನಾ ಎಂದು ಎಟಿಎಸ್ ಆರೋಪಿಸಿದೆ.
ವಿವಿಧ ಭಯೋತ್ಪಾದಕ ಸಂಘಟನೆಗಳೊಳಗೆ ನುಸುಳುವಂತೆ ಸೇನಾ ಗೂಢಚಾರ್ಯೆ ಇಲಾಖೆ ತನ್ನನ್ನು ನಿಯೋಜಿಸಿತ್ತು. ಮೇಲಧಿಕಾರಿಗಳು ಸತತ ತನ್ನ ಸಂಪರ್ಕದಲ್ಲಿದ್ದರೆಂದು ಕಳೆದ 7 ವರ್ಷಗಳಿಂದ ಕಾರಾಗೃಹದಲ್ಲಿರುವ ಪುರೋಹಿತ್ ಪ್ರತಿಪಾದಿಸಿದ್ದಾರೆ.







