ಇಸ್ರೋ ಬಾಹ್ಯಾಕಾಶ ಉಡಾವಕಗಳು ಬೇಡ
ಅಮೆರಿಕದ ಖಾಸಗಿ ಬಾಹ್ಯಾಕಾಶ ಉದ್ದಿಮೆ
ವಾಶಿಂಗ್ಟನ್, ಎ. 22: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದೊಂದಿಗಿನ ಸಹಕಾರವನ್ನು ವಿಸ್ತರಿಸಲು ಅಮೆರಿಕವೇನೋ ಸಂಕಲ್ಪ ಮಾಡಿದೆ. ಆದರೆ, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಆ ದೇಶದ ಖಾಸಗಿ ಬಾಹ್ಯಾಕಾಶ ಉದ್ದಿಮೆ ಇದಕ್ಕೆ ಒಪ್ಪುತ್ತಿಲ್ಲ. ಅಮೆರಿಕದ ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿಡಲು ಕಡಿಮೆ ವೆಚ್ಚದ ಇಸ್ರೋದ ಉಡಾವಣಾ ವಾಹಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದನ್ನು ಅದು ವಿರೋಧಿಸುತ್ತಿದೆ.
ಇಸ್ರೋದ ಉಡವಣಾ ವಾಹಕಗಳನ್ನು ಬಳಸುವುದು ಅಮೆರಿಕದ ಖಾಸಗಿ ಕ್ಷೇತ್ರದ ಬಾಹ್ಯಾಕಾಶ ಕಂಪೆನಿಗಳ ಭವಿಷ್ಯದ ಆರೋಗ್ಯಕ್ಕೆ ಮಾರಕವಾಗಿರುತ್ತದೆ ಎಂದು ಅಮೆರಿಕದ ಖಾಸಗಿ ಬಾಹ್ಯಾಕಾಶ ಉದ್ದಿಮೆಯ ಅಧಿಕಾರಿಗಳು ಮತ್ತು ಕಾರ್ಪೊರೇಟ್ ನಾಯಕರು ಈ ವಾರ ಅಮೆರಿಕದ ಕಾಂಗ್ರೆಸ್‌ನಲ್ಲಿ ಸಂಸದರಿಗೆ ವಿವರಣೆ ನೀಡಿದರು. ಕಡಿಮೆ ವೆಚ್ಚದ ಇಸ್ರೋ ಉಡಾವಣಾ ವಾಹಕಗಳೊಂದಿಗೆ ಸ್ಪರ್ಧಿಸುವುದು ಅಮೆರಿಕದ ಖಾಸಗಿ ಬಾಹ್ಯಾಕಾಶ ಕಂಪೆನಿಗಳಿಗೆ ಕಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ. ಇಸ್ರೋಗೆ ಭಾರತ ಸರಕಾರ ಸಬ್ಸಿಡಿ ನೀಡುತ್ತಿದೆ ಎಂದು ಅವರು ಆರೋಪಿಸಿದರು.‘‘ಭಾರತೀಯ ಉಡಾವಣಾ ವಾಹಕಗಳನ್ನು ಬಳಸಲು ಹಿಂದೇಟು ಹಾಕುತ್ತಿರುವುದಕ್ಕೆ, ಸೂಕ್ಷ್ಮ ತಂತ್ರಜ್ಞಾನವನ್ನು ಇನ್ನೊಂದು ಪ್ರಜಾಸತ್ತಾತ್ಮಕ ದೇಶಕ್ಕೆ ವರ್ಗಾವಣೆ ಮಾಡಬೇಕಾಗುತ್ತದೆ ಎಂಬ ಆತಂಕ ಕಾರಣವಲ್ಲ ಎಂದು ನನಗನಿಸುತ್ತದೆ. ಇಸ್ರೋದ ಪ್ರತಿಸ್ಪರ್ಧಿಗಳು ಮಾರುಕಟ್ಟೆಯಿಂದಲೇ ಹೊರದಬ್ಬಲ್ಪಡುವಷ್ಟು ಪ್ರಮಾಣದಲ್ಲಿ ಆ ಸಂಸ್ಥೆಗೆ ಸರಕಾರ ಸಬ್ಸಿಡಿ ನೀಡುತ್ತಿದೆ ಎನ್ನುವುದೇ ನಮ್ಮ ಕಳವಳಕ್ಕೆ ಪ್ರಧಾನ ಕಾರಣ’’ ಎಂದು ‘ಸ್ಪೇಸ್ ಫೌಂಡೇಶನ್’ನ ಸಿಇಒ ಎಲಿಯಟ್ ಹೋಲೊಕ್ವಾಹಿ ಪಲ್ಹಮ್ ಹೇಳಿದ್ದಾರೆ.





