ಚೀನಾದ ‘ಭಯೋತ್ಪಾದಕ’ರಿಗೆ ಭಾರತ ಭೇಟಿಗೆ ಅವಕಾಶ?
ಮಸೂದ್ ಅಝರ್‌ಗೆ ಚೀನಾ ನೀಡುತ್ತಿರುವ ಬೆಂಬಲಕ್ಕೆ ಭಾರತದ ಪ್ರತಿಕ್ರಿಯೆಯೇ?
ಬೀಜಿಂಗ್, ಎ. 22: ವಿಶ್ವ ಉಯ್‌ಘುರ್ ಕಾಂಗ್ರೆಸ್ (ಡಬ್ಲುಯುಸಿ)ನ ನಾಯಕ ಡೋಲ್ಕುನ್ ಇಸ ಭಾರತಕ್ಕೆ ನೀಡಿದ್ದಾರೆ ಎನ್ನಲಾದ ಭೇಟಿಯ ಬಗ್ಗೆ ಚೀನಾ ಇಂದು ಆತಂಕ ವ್ಯಕ್ತಪಡಿಸಿದೆ. ಆತ ಇಂಟರ್‌ಪೋಲ್‌ನ ರೆಡ್ ಕಾರ್ನರ್‌ನಲ್ಲಿರುವ ‘‘ಭಯೋತ್ಪಾದಕ’’ನಾಗಿದ್ದು, ಆತನನ್ನು ಕಾನೂನಿನ ವಶಕ್ಕೆ ಒಪ್ಪಿಸುವುದು ಎಲ್ಲ ದೇಶಗಳ ಬದ್ಧತೆಯಾಗಿದೆ ಎಂದು ಹೇಳಿದೆ.
‘‘ಡೋಲ್ಕುನ್ ಸೇರಿದಂತೆ ಡಬ್ಲುಯುಸಿ ನಾಯಕರಿಗೆ ಈ ತಿಂಗಳ ಕೊನೆಯಲ್ಲಿ ದಲಾಯಿ ಲಾಮಾರನ್ನು ಭೇಟಿಯಾಗಲು ಅನುಮತಿ ನೀಡಲಾಗಿದೆ ಎಂಬ ವರದಿಗಳ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ, ‘‘ಈ ಬಗ್ಗೆ ನನಗೆ ಗೊತ್ತಿಲ್ಲ’’ ಎಂದು ಚೀನಾದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಹುವ ಚುನ್‌ಯಿಂಗ್ ಪಿಟಿಐಗೆ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.
‘‘ನಾನು ಹೇಳುವುದೇನೆಂದರೆ, ಡೋಲ್ಕುನ್ ಇಂಟರ್‌ಪೋಲ್‌ನ ರೆಡ್ ಕಾರ್ನರ್‌ನಲ್ಲಿರುವ ಭಯೋತ್ಪಾದಕ. ಆತನನ್ನು ಕಾನೂನಿಗೆ ಒಪ್ಪಿಸುವುದು ಎಲ್ಲ ದೇಶಗಳ ಬದ್ಧತೆಯಾಗಿದೆ’’ ಎಂದು ಹುವ ಹೇಳಿದ್ದಾರೆ.
ಚೀನಾದ ಭಿನ್ನಮತೀಯರಾಗಿರುವ ಡೋಲ್ಕುನ್ 1990ರ ದಶಕದಿಂದಲೂ ಜರ್ಮನಿಯಲ್ಲಿ ಆಶ್ರಯ ಪಡೆದಿದ್ದಾರೆ.
ಧರ್ಮಶಾಲಾದಲ್ಲಿ ನಡೆಯಲಿರುವ ಪ್ರಜಾಪ್ರಭುತ್ವ ಪರ ಸಮಾವೇಶವೊಂದರಲ್ಲಿ ಅವರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ದಲಾಯಿ ಲಾಮಾ ಕೂಡ ಭಾಗವಹಿಸಲಿದ್ದಾರೆ. ಡಬ್ಲುಯುಸಿ ನಾಯಕರು ಗಲಭೆಪೀಡಿತ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆಂದು ಚೀನಾ ಆರೋಪಿಸುತ್ತಿದೆ. ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿರುವ ಪಾಕಿಸ್ತಾನದ ಜೈಶೆ ಮುಹಮ್ಮದ್‌ನ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಗಳಿಗೆ ಚೀನಾ ವೀಟೊ (ತಡೆ) ಚಲಾಯಿಸಿರುವುದನ್ನು ಸ್ಮರಿಸಬಹುದಾಗಿದೆ. ಚೀನಾದ ಈ ಕ್ರಮಕ್ಕೆ ಪ್ರತಿಯಾಗಿ, ಭಯೋತ್ಪಾದಕರೆಂದು ಚೀನಾ ಘೋಷಿಸಿರುವ ಡಬ್ಲುಯುಸಿ ನಾಯಕರನ್ನು ಭಾರತಕ್ಕೆ ಆಹ್ವಾನಿಸಿದೆ ಎಂದು ಹೇಳಲಾಗಿದೆ.
ಚೀನಾದ ವಿವಿಧ ಭಾಗಗಳಿಂದ ಹಾನ್ ಸಮುದಾಯಕ್ಕೆ ಸೇರಿದ ಜನರು ಕ್ಸಿನ್‌ಜಿಯಾಂಗ್ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ನೆಲೆಸುತ್ತಿರುವುದನ್ನು ವಿರೋಧಿಸಿ ಉಯ್‌ಘುರ್ ಸಮುದಾಯದವರು ಹಲವು ವರ್ಷಗಳಿಂದ ಪ್ರತಿಭಟಿಸುತ್ತಿದ್ದಾರೆ. ಈ ರಾಜ್ಯದಲ್ಲಿ ತುರ್ಕಿ ಮೂಲದ ಮುಸ್ಲಿಮರಾಗಿರುವ ಉಯ್‌ಘುರ್‌ಗಳ ಸಂಖ್ಯೆ ಒಂದು ಕೋಟಿಗೂ ಅಧಿಕವಿದೆ. ಈ ಘರ್ಷಣೆಯ ಹಿನ್ನೆಲೆಯಲ್ಲಿ ಕ್ಸಿನ್‌ಜಿಯಾಂಗ್ ರಾಜ್ಯವು ಬೆಂಕಿ ಕುಂಡದಂತಾಗಿದೆ.
ಕ್ಸಿನ್‌ಜಿಯಾಂಗ್ ಮತ್ತು ದೇಶದ ಇತರ ಭಾಗಗಳಲ್ಲಿ ಈಸ್ಟ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್ (ಇಟಿಐಎಂ) ಎಂಬ ಸಂಘಟನೆ ಭಯೋತ್ಪಾದಕ ದಾಳಿ ನಡೆಸುತ್ತಿದೆ ಎಂಬುದಾಗಿ ಚೀನಾ ಆರೋಪಿಸುತ್ತಿದೆ.







