ಮೆಕ್ಸಿಕೊ: ಪೆಟ್ರೊಕೆಮಿಕಲ್ ಸ್ಥಾವರದಲ್ಲಿ ಸ್ಫೋಟ
ಮೃತರ ಸಂಖ್ಯೆ 24ಕ್ಕೆ
ಕೋಟ್ಝಕೋಲ್ಕಾಸ್ (ಮೆಕ್ಸಿಕೊ), ಎ. 22: ಮೆಕ್ಸಿಕೊದ ದಕ್ಷಿಣದ ಕರಾವಳಿಯಲ್ಲಿರುವ ಪೆಟ್ರೊಕೆಮಿಕಲ್ ಸ್ಥಾವರವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೇರಿದೆ ಎಂದು ಸರಕಾರಿ ತೈಲ ಕಂಪೆನಿ ಪೆಟ್ರೊಲಿಯಸ್ ಮೆಕ್ಸಿಕನೋಸ್ (ಪೆಮೆಕ್ಸ್) ಹೇಳಿದೆ.
ಎಂಟು ಕಾರ್ಮಿಕರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ಗುರುವಾರ ತಡರಾತ್ರಿ ಪೆಮೆಕ್ಸ್ ತಿಳಿಸಿದೆ. ಅದೇ ವೇಳೆ, 19 ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪೈಕಿ 13 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ.
ಸ್ಫೋಟದ ಬಳಿಕ ವಿಷಕಾರಿ ಅನಿಲದ ಬೃಹತ್ ಮೋಡವೊಂದು ಆಕಾಶವನ್ನು ಆವರಿಸಿತು. ಘಟನೆಯಲ್ಲಿ ನೂರಕ್ಕೂ ಅಧಿಕ ಮಂದಿ ಅಸ್ವಸ್ಥರಾದರು.
ಸ್ಫೋಟದ ಹಿನ್ನೆಲೆಯಲ್ಲಿ ಸ್ಥಾವರದ ಸಮೀಪದಲ್ಲಿ ವಾಸಿಸುತ್ತಿದ್ದ ಜನರನ್ನು ಸ್ಥಳಾಂತರಿಸಲಾಯಿತು.
ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಪೆಮೆಕ್ಸ್ ನಿರ್ದೇಶಕ ಜೋಸ್ ಆಂಟೋನಿಯೊ ಗೊನ್ಸಾಲಿಸ್ ಅನಯ ‘ರೇಡಿಯೊ ಫಾರ್ಮುಲ’ಕ್ಕೆ ತಿಳಿಸಿದರು.
ಸ್ಫೋಟ ಸಂಭವಿಸಿದ ಕ್ಲೋರಡೋಸ್ 3 ಸ್ಥಾವರದಲ್ಲಿ ಅತ್ಯಂತ ಅಪಾಯಕಾರಿ ಕೈಗಾರಿಕಾ ರಾಸಾಯನಿಕ ವಿನೈಲ್ ಕ್ಲೋರೈಡನ್ನು ಉತ್ಪಾದಿಸಲಾಗುತ್ತಿತ್ತು.
ಮೆಕ್ಸಿಕೊ ಅಧ್ಯಕ್ಷ ಎನ್ರಿಕ್ ಪೆನ ನೈಟೊ ಸ್ಥಾವರಕ್ಕೆ ಭೇಟಿ ನೀಡಿ ಅಲ್ಲಿ ನೆರೆದಿದ್ದ ಕೆಲಸಗಾರರ ಸಂಬಂಧಿಕರನ್ನು ಸಂತೈಸಿದರು.







