ಕಡತಗಳ ವಿಲೇವಾರಿಯಲ್ಲಿ ಉಡುಪಿಗೆ ಅಗ್ರಸ್ಥಾನ: ಡಾ.ವಿಶಾಲ್
ಉಡುಪಿ, ಎ.22: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜನಸಾಮಾನ್ಯರ ಕಡತಗಳನ್ನು ವಿಳಂಬವಿಲ್ಲದೆ ವಿಲೇ ಮಾಡುವಲ್ಲಿ ಉಡುಪಿ ಜಿಲ್ಲಾಡಳಿತ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆ ಯ ಸಾಧನೆಗಳ ವಿವರಗಳನ್ನು ನೀಡಿದ ಅವರು, ‘ಸಕಾಲ’ ಯೋಜನೆಯಡಿ ನಿರಂತರವಾಗಿ ಯಾವುದೇ ವಿಳಂಬವಿಲ್ಲದೆ ಸೇವೆ ನೀಡುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ದಲ್ಲಿದೆ. ಭೂಮಿ ಯೋಜನೆಯಡಿ ಅತೀ ಶೀಘ್ರವೇ ಖಾತೆ ಬದ ಲಾವಣೆ ಪ್ರಕರಣ ವಿಲೇಯಲ್ಲೂ 2ನೆ ಸ್ಥಾನದಲ್ಲಿದೆ ಎಂದರು. ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ನೀಡುತ್ತಿರುವ ಸೇವೆ ಯಲ್ಲೂ ಉಡುಪಿಗೆ ಪ್ರಥಮ ರ್ಯಾಂಕ್ ದೊರಕಿದೆ. ಈ ಕೇಂದ್ರ ಗಳಲ್ಲಿ ಸಾಮಾಜಿಕ ಸುರಕ್ಷೆ ಸೇರಿದಂತೆ ಒಟ್ಟು 37 ಸೇವೆಗಳು ಲಭ್ಯವಿದೆ. ಜಿಲ್ಲೆಯಲ್ಲಿ ಕಂದಾಯ ಇಲಾಖೆ ವಿಳಂಬವಿಲ್ಲದೆ ಜನಪರ ಸೇವೆ ನೀಡುತ್ತಿದ್ದು, ಸಮಯ ಮಿತಿಯೊಳಗೆ ಸೇವೆ ಒದಗಿ ಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಒಟ್ಟು 9,451 ಕಡತಗಳನ್ನು ವಿಲೇ ಮಾಡಲಾಗಿದೆ ಎಂದರು. ಜಿಲ್ಲಾಧಿಕಾರಿಗಳು ಅರೆನ್ಯಾಯಿಕ ದಂಡಾಧಿಕಾರಿಗಳಾಗಿದ್ದು, ಒಂದು ವರ್ಷದ ಅವಧಿಯಲ್ಲಿ 1,855 ಪ್ರಕರಣಗಳನ್ನು ವಿಲೇ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಇನ್ನಿತರ ಅಭಿ ವೃದ್ಧಿ ಕಾರ್ಯಗಳಿಗೆ ಭೂಮಿ ಪಡೆದುಕೊಂಡ ರೈತರಿಗೆ ಅತಿಹೆಚ್ಚಿನ ಪರಿಹಾರ ನೀಡಲಾಗಿದೆ. ಜೊತೆಗೆ ಕಂದಾಯ ದಾಖಲೆಗೆ ಸಂಬಂಧಿ ಸಿದ ಪ್ರಕರಣ ಇತ್ಯರ್ಥ ಪಡಿಸಿ, ರೈತರಿಗೆ, ಜನಸಾ ಮಾನ್ಯರಿಗೆ ನ್ಯಾಯ ಒದಗಿಸಲಾಗಿದೆ ಎಂದವರು ವಿವರಿಸಿದರು.
ಪಹಣಿ ಪತ್ರಗಳ ತಿದ್ದುಪಡಿಗಾಗಿ ಜಿಲ್ಲೆಯಲ್ಲಿ ನಡೆಸಿದ 330 ಕಂದಾಯ ಅದಾಲತ್‌ಗಳಲ್ಲಿ 14,924 ಅರ್ಜಿಗಳು ಸ್ವೀಕೃತವಾಗಿದ್ದು, ಇವುಗಳಲ್ಲಿ 14,819 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 105 ಅರ್ಜಿಗಳು ಮಾತ್ರ ವಿಲೇಗೆ ಬಾಕಿ ಇದೆ ಎಂದರು. ಈ ವರ್ಷ 2,882 ಪ್ರಕರಣಗಳಲ್ಲಿ ಒಟ್ಟು 449.53 ಎಕರೆ ಪ್ರದೇಶವನ್ನು ಭೂಪರಿವರ್ತನೆ ಮಾಡಲಾಗಿದ್ದು, 91.87 ಲಕ್ಷ ರೂ. ವಸೂಲಾಗಿದೆ ಎಂದರು. 7.53 ಕೋಟಿ ರೂ.ಪರಿಹಾರ:
ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಒಟ್ಟು 961 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 7.53 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಈ ವರ್ಷ ಆರು ಜೀವಹಾನಿಯಾಗಿದ್ದು, 24 ಲಕ್ಷ ರೂ. ಪರಿಹಾರ ಹಂಚಲಾಗಿದೆ. 34 ಜಾನುವಾರು ಹಾಗೂ 620 ಮನೆಗಳಿಗೆ ಹಾನಿಯಾಗಿವೆ. ಇವುಗಳಿಗೆ 76 ಲಕ್ಷ ರೂ. ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಒಂಬತ್ತು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಆರಕ್ಕೆ ಪರಿಹಾರ ನೀಡಲಾಗಿದೆ. ಮೂರನ್ನು ತಿರಸ್ಕರಿಸಲಾಗಿದೆ ಎಂದು ಡಾ.ವಿಶಾಲ್ ನುಡಿದರು. ಭೂಸ್ವಾಧೀನ:
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ 121.21 ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ವಿವಿಧ ಸಾರ್ವಜನಿಕ ಉದ್ದೇಶಗಳಿಗೆ 308 ಎಕರೆ ಜಮೀನನ್ನು ಕಾದಿರಿಸಲಾಗಿದೆ. ಇವುಗಳಲ್ಲಿ ವಾರಾಹಿ ನೀರಾವರಿ ಯೋಜನೆಗೆ 59 ಎಕರೆ, ಕರಾವಳಿ ಕಾವಲು ಪಡೆಗೆ 25 ಎಕರೆ, ಮನೆ ನಿವೇಶನಗಳಿಗೆ 138.48 ಎಕರೆ, ಶಾಲಾ-ಕಾಲೇಜುಗಳಿಗೆ 35.46 ಎಕರೆ, ಘನತ್ಯಾಜ್ಯ ನಿರ್ವಹಣೆಗೆ 15.36 ಎಕರೆ ಸೇರಿವೆ ಎಂದವರು ಹೇಳಿದರು. ವಾರಾಹಿ ಎಡದಂಡೆ ಮತ್ತು ಬಲದಂಡೆ ಯೋಜನೆಗೆ 115 ಎಕರೆ ಭೂಸ್ವಾಧೀನವೂ ಸೇರಿದಂತೆ ಪಾದೆಬೆಟ್ಟುವಿನಲ್ಲಿ ರೈಲ್ವೆಗೆ 1.89 ಎಕರೆ, ಮಣಿಪಾಲದ ಶಿವಳ್ಳಿಯಲ್ಲಿ ಒಳಚರಂಡಿ ವ್ಯವಸ್ಥೆಗೆ 10 ಸೆನ್ಸ್ ಜಾಗ ಸೇರಿದಂತೆ ಈವರೆಗೆ ಭೂಸ್ವಾಧೀನಕ್ಕಾಗಿ ಈವರೆಗೆ ಒಟ್ಟು 23.77 ಕೋಟಿ ರೂ.ಗಳನ್ನು ಪರಿಹಾರವಾಗಿ ಹಂಚಲಾಗಿದೆ ಎಂದು ಡಾ.ವಿಶಾಲ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಹಾಗೂ ಜಿಲ್ಲಾ ಭೂಮಾಪನಾಧಿಕಾರಿ ಕುಸುಮಾಧರ್ ಉಪಸ್ಥಿತರಿದ್ದರು.







