ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಎಂಸಿಎ ಸುಪ್ರೀಂಗೆ ಮೊರೆ
ಹೊಸದಿಲ್ಲಿ, ಎ.22: ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಬಾಂಬೆ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್(ಎಂಸಿಎ) ಶುಕ್ರವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಜಸ್ಟಿಸ್ ದೀಪಕ್ ಮಿಶ್ರಾ ಹಾಗೂ ಶಿವ ಕೀರ್ತಿ ಅವರನ್ನೊಳಗೊಂಡ ನ್ಯಾಯಪೀಠ ಮುಂದೆ ಎಂಸಿಎ ಪರ ವಾದ ಮಂಡಿಸಿದರು. ನ್ಯಾಯಾಲಯ ಎ.25 ರಂದು ಅರ್ಜಿಯ ವಿಚಾರಣೆ ನಿಗದಿಪಡಿಸಿದೆ.
ನಾವು ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಪಿಚ್‌ಗಳಿಗೆ ಕುಡಿಯುವ ನೀರನ್ನು ಬಳಸುತ್ತಿಲ್ಲ. ಅದರ ಬದಲಿಗೆ ತ್ಯಾಜ್ಯ ನೀರನ್ನು ಬಳಸುತ್ತಿದ್ದೇವೆ ಎಂದು ಕ್ರಿಕೆಟ್ ಅಸೋಸಿಯೇಶನ್ ತನ್ನ ಅರ್ಜಿಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇರುವುದರಿಂದ ಎ.30ರ ನಂತರ ಮಹಾರಾಷ್ಟ್ರದಲ್ಲಿ ನಡೆಯಲಿರುವ ಎಲ್ಲ ಐಪಿಎಲ್ ಪಂದ್ಯಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವಂತೆ ಬಾಂಬೆ ಹೈಕೋರ್ಟ್ ಎ.13 ರಂದು ಆದೇಶ ನೀಡಿತ್ತು. ಹೈಕೋರ್ಟ್‌ನ ಆದೇಶದ ಪ್ರಕಾರ ಮುಂಬೈನಲ್ಲಿ ಮೇ 29 ರಂದು ನಡೆಯಲಿರುವ ಫೈನಲ್ ಪಂದ್ಯ ಸಹಿತ 13 ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆಯುವಂತಿಲ್ಲ.
ಮುಖ್ಯಮಂತ್ರಿ ಬರ ಪರಿಹಾರ ನಿಧಿಗೆ ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ ಹಾಗೂ ಪುಣೆ 5 ಕೋಟಿ ರೂ. ನೆರವು ನೀಡಲು ಸಮ್ಮತಿಸಿವೆ ಎಂದು ಬಿಸಿಸಿಐ ಭರವಸೆ ನೀಡಿದ ಹೊರತಾಗಿಯೂ ಹೈಕೋರ್ಟ್ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿತ್ತು.







