ಡೆಲ್ಲಿಗೆ ಇಂದು ಹ್ಯಾಟ್ರಿಕ್ ಗೆಲುವು ಸಾಧಿಸುವ ವಿಶ್ವಾಸ
ಹೊಸದಿಲ್ಲಿ, ಎ.22: ಕಳಪೆ ಆರಂಭದಿಂದ ಹೊರ ಬಂದಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡ ತವರು ನೆಲದಲ್ಲಿ ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಟೂರ್ನಿಯಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್‌ಗಳ ಅಂತರದಿಂದ ಸೋತಿದ್ದ ಡೆಲ್ಲಿ ತಂಡ ಕಳೆದ ಎರಡು ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಪ್ರಬಲ ಪ್ರತಿಹೋರಾಟ ನೀಡಿದೆ.
ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ 3ನೆ ಸ್ಥಾನದಲ್ಲಿರುವ ಡೆಲ್ಲಿ 3 ಪಂದ್ಯಗಳಲ್ಲಿ 4 ಅಂಕವನ್ನು ಗಳಿಸಿದೆ. ಐದು ಪಂದ್ಯಗಳ ಪೈಕಿ 2 ಗೆಲುವು ಹಾಗೂ 3ರಲ್ಲಿ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ 5ನೆ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ಈತನಕ ಮಿಶ್ರ ಫಲಿತಾಂಶ ದಾಖಲಿಸಿದ್ದು, ಪಂಜಾಬ್ ಹಾಗೂ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿದರೆ, ಪುಣೆ, ಗುಜರಾತ್ ಹಾಗೂ ಹೈದರಾಬಾದ್ ವಿರುದ್ಧದ ಉಳಿದ ಮೂರು ಪಂದ್ಯಗಳನ್ನು ಸುಲಭವಾಗಿ ಸೋತಿತ್ತು.
ಕೋಲ್ಕತಾ ವಿರುದ್ಧದ ಮೊದಲ ಪಂದ್ಯದಲ್ಲಿ ಡೆಲ್ಲಿ ಕೇವಲ 98 ರನ್‌ಗೆ ಆಲೌಟಾಗಿತ್ತು. ಪಂಜಾಬ್ ವಿರುದ್ಧದ 2ನೆ ಪಂದ್ಯದಲ್ಲಿ 112 ರನ್ ಗುರಿ ನೀಡಿತ್ತು. ಆದರೆ, ಆರ್‌ಸಿಬಿ ವಿರುದ್ಧದ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಆರಂಭಿಕ ದಾಂಡಿಗ ಕ್ವಿಂಟನ್ ಡಿಕಾಕ್ ಈವರ್ಷದ ಐಪಿಎಲ್‌ನಲ್ಲಿ ದಾಖಲಿಸಿದ್ದ ಚೊಚ್ಚಲ ಶತಕದ(108 ರನ್, 51 ಎಸೆತ) ಸಹಾಯದಿಂದ ಡೆಲ್ಲಿ ತಂಡ 192 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.
ಡಿಕಾಕ್‌ರಲ್ಲದೆ ಯುವ ದಾಂಡಿಗ ಕರುಣ್ ನಾಯರ್ 42 ಎಸೆತಗಳಲ್ಲಿ ಔಟಾಗದೆ 54 ರನ್ ಗಳಿಸಿ ಡೆಲ್ಲಿಯ ಗೆಲುವಿಗೆ ಕಾಣಿಕೆ ನೀಡಿದ್ದರು. ಡೆಲ್ಲಿ ತಂಡದಲ್ಲಿ ಡಿಕಾಕ್ ಹಾಗೂ ನಾಯರ್ ಹೊರತುಪಡಿಸಿ ಉಳಿದವರ ಸಾಧನೆ ಶೂನ್ಯ.
ಜೆಪಿ ಡುಮಿನಿ, ಪವನ್ ನೇಗಿ ಹಾಗೂ ಕಾರ್ಲೊಸ್ ಬ್ರಾಥ್‌ವೈಟ್ ಗೆ ಪಂದ್ಯ ಗೆಲ್ಲಿಸಿಕೊಡುವ ತಾಕತ್ತಿದೆ. ವಿಂಡೀಸ್‌ನ ಬ್ರಾಥ್‌ವೈಟ್ ಐಸಿಸಿ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಸತತ 4 ಸಿಕ್ಸರ್ ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು.
ಡೆಲ್ಲಿಯ ವೇಗದ ಬೌಲಿಂಗ್‌ನ್ನು ನಾಯಕ ಝಹೀರ್‌ಖಾನ್ ಮುನ್ನಡೆಸುತ್ತಿದ್ದಾರೆ. ಕ್ರಿಸ್ ಮೊರಿಸ್, ಮುಹಮ್ಮದ್ ಶಮಿ ಅವರಿಗೆ ಸಾಥ್ ನೀಡುತ್ತಿದ್ದಾರೆ. ಸ್ಪಿನ ವಿಭಾಗದಲ್ಲಿ ಅಮಿತ್ ಮಿಶ್ರಾ ಹಾಗೂ ಪವನ್ ನೇಗಿ ಅವರಿದ್ದಾರೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತವರು ನೆಲದಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿದೆ.
ಪುಣೆ ಹಾಗೂ ಗುಜರಾತ್ ತಂಡಗಳು ಮುಂಬೈಯನ್ನು ಅದರದೇ ನೆಲದಲ್ಲಿ ಮಣಿಸಿವೆ. ಮುಂಬೈನ ಅಗ್ರ ಕ್ರಮಾಂಕ ನಾಯಕ ರೋಹಿತ್ ಶರ್ಮರನ್ನೆ ಹೆಚ್ಚು ಅವಲಂಬಿಸಿದೆ. ರೋಹಿತ್ ಕಳೆದೆರಡು ಪಂದ್ಯಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. ಸಿಮನ್ಸ್ ಬದಲಿಗೆ ಆಡಿರುವ ಮಾರ್ಟಿನ್ ಗಪ್ಟಿಲ್ ಹೈದರಾಬಾದ್‌ನ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಫಿಟ್‌ನೆಸ್ ಪಡೆದಿರುವ ಕೀರನ್ ಪೊಲಾರ್ಡ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 19 ಎಸೆತಗಳಲ್ಲಿ ಔಟಾಗದೆ 39 ರನ್ ಗಳಿಸಿ ಗಮನ ಸೆಳೆದಿದ್ದರು.
ಪಂದ್ಯದ ಸಮಯ: ಸಂಜೆ 4:00







