ಖಿನ್ನತೆಯ ಸುಳಿಯಲ್ಲಿ ಭಾರತ
ಸಾಮಾನ್ಯ ಭಾರತೀಯನೊಬ್ಬನಿಗೆ ತನ್ನ ಜೀವನದಲ್ಲಿ ಹಲವು ಸಮಸ್ಯೆಗಳ ಪೈಕಿ, ಖಿನ್ನತೆಯನ್ನು ಮಾತ್ರ ಐಶಾರಾಮಿ ವರ್ಗದ ಸಮಸ್ಯೆಯೆಂಬಂತೆ ಬಿಂಬಿಸಲಾಗುತ್ತದೆ. ಹತ್ತಿರಹತ್ತಿರ ಶೇ.36ರಷ್ಟು ಮಂದಿ ಭಾರತೀಯರು ಖಿನ್ನತೆಯನ್ನು ಅನುಭವಿಸುತ್ತಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯನ್ನು ವ್ಯಕ್ತಿಗೆ ತಗಲಿದ ಕಳಂಕವೆಂಬಂತೆ ಭಾವಿಸಲಾಗುತ್ತದೆ. ಅದೊಂದು ಆತನ ದೌರ್ಬಲ್ಯದ ಸಂಕೇತವಾಗಿ ನೋಡಲಾಗುತ್ತದೆ. ಹೀಗಾಗಿ ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಇದೊಂದು ಅಪಮಾನಕಾರಿಯಾದ್ದರಿಂದ ಆ ಬಗ್ಗೆ ಮುಕ್ತವಾಗಿ ಚರ್ಚಿಸುವ ಮನೋಭಾವ ನಮ್ಮ ಸಮಾಜಲ್ಲಿ ಕಂಡುಬರುತ್ತಿಲ್ಲ.
ಇತ್ತೀಚೆಗೆ ‘ಟೆಡ್‌ಟಾಕ್’ ಎನ್‌ಜಿಓ ಸಂಸ್ಥೆಯ ವತಿಯಿಂದ ಹೆಲೆನ್ ಎಂ. ಫಾರೆಲ್ ಎಂಬಾಕೆ ನಿರ್ಮಿಸಿರುವ ವೀಡಿಯೊವೊಂದು ಖಿನ್ನತೆಯ ಸಂಕೀರ್ಣ ರೋಗಲಕ್ಷಣಗಳು, ಕಾರಣಗಳು ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ಪರಿಣಾಮಕಾರಿಯಾಗಿ ವಿವರಿಸಿದೆ. ಕಣ್ಣಿಗೆ ಕಾಣುವ ದೈಹಿಕ ಅಸ್ವಸ್ಥತೆಗಿಂತ, ಮಾನಸಿಕ ಅಸ್ವಸ್ಥತೆಯನ್ನು ಅರಿತುಕೊಳ್ಳುವುದು ತೀರಾ ಕಷ್ಟ. ಹೀಗಾಗಿ ಅದಕ್ಕೆ ಚಿಕಿತ್ಸೆಯನ್ನು ನೀಡುವುದು ತೀರಾ ಸಂಕೀರ್ಣವಾಗಿದೆ. ಖಿನ್ನತೆಯ ಸಮಸ್ಯೆಯನ್ನು ನಿಯಂತ್ರಿಸಲು ಸಾಮಾನ್ಯವಾಗಿದೈಹಿಕ ವ್ಯಾಯಾಮ ಹಾಗೂ ಉತ್ತಮ ಆಹಾರ ಸೇವಿಸಬೇಕೆಂದು ಸಲಹೆ ನೀಡಲಾಗುತ್ತದೆ. ಇವೆರಡೂ ತಮ್ಮದೇ ಆದ ನೆಲೆಯಲ್ಲಿ ಖಿನ್ನತೆ ಪೀಡಿತನಿಗೆ ಪ್ರಯೋಜನಕಾರಿಯಾಗಿವೆ. ಆದರೆ ಇದರ ಜೊತೆಗೆ ಮಾನಸಿಕ ಆರೋಗ್ಯದ ಸಮತೋಲನಕ್ಕಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಕೂಡಾ ಅತ್ಯಗತ್ಯವಾಗಿದೆ.
ಸರಾಸರಿಯಾಗಿ ಓರ್ವ ಖಿನ್ನತೆ ಕಾಯಿಲೆ ಪೀಡಿತನು ವೈದ್ಯಕೀಯ ನೆರವನ್ನು ಕೇಳಲು ಹತ್ತು ವರ್ಷ ತೆಗೆದುಕೊಳ್ಳುತ್ತಾನೆ. ಆದರೆ ಈ ಅಂಕಿಅಂಶಗಳೆಲ್ಲವೂ ಅಮೆರಿಕಕ್ಕೆ ಸಂಬಂಧಿಸಿದ್ದಾಗಿವೆ. ಭಾರತದ ವಿಷಯಕ್ಕೆ ಬರುವುದಾದರೆ ಈ ವಿಷಯವಾಗಿ ಸಾರ್ವಜನಿಕ ಜಾಲತಾಣಗಳಲ್ಲಿ ಯಾವುದೇ ಅಂಕಿಅಂಶಗಳು ಲಭ್ಯವಿಲ್ಲ. ಭಾರತದಲ್ಲಿ ಖಿನ್ನತೆಯ ಕಾಯಿಲೆಯನ್ನು ದೊಡ್ಡ ಮಟ್ಟದಲ್ಲಿ ನಿರ್ಲಕ್ಷಿಸಲಾಗುತ್ತಿದೆಯೆಂಬುದಂತೂ ವಾಸ್ತವ ಸಂಗತಿಯಾಗಿದೆ.
ಭಾರತದ ಯುವಜನತೆಯಲ್ಲಿ ಖಿನ್ನತೆಯ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ದೇಶಾದ್ಯಂತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ. ಅಂತಾರಾಷ್ಟ್ರೀಯ ಪತ್ರಿಕೆ ‘ಕ್ವಾರ್ಟ್ಜ್’ನಲ್ಲಿ ಪ್ರಕಟವಾದ ಲೇಖನವೊಂದು, ಸರಾಸರಿ ಒಂದು ವರ್ಷದಲ್ಲಿ 15ರಿಂದ 29 ವರ್ಷದೊಳಗಿನ ಪ್ರತಿ 1 ಲಕ್ಷ ಭಾರತೀಯರ ಪೈಕಿ 36 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಜಗತ್ತಿನ ಯುವಜನತೆಯಲ್ಲಿಯೇ ಅತ್ಯಧಿಕ ಆತ್ಮಹತ್ಯೆ ಪ್ರಮಾಣವಾಗಿದೆಯೆಂದು ಅದು ಹೇಳಿದೆ.
ಅನೇಕ ಮಂದಿಗೆ ತಾವು ವೈದ್ಯಕೀಯ ಸ್ವರೂಪದ ಖಿನ್ನತೆಯಿಂದ ನರಳುತ್ತಿದ್ದೇವೆಂಬುದರ ಅರಿವಿರುವುದೇ ಇಲ್ಲ. ಈ ಕಾಯಿಲೆಯ ಬಗ್ಗೆ ಬಹುತೇಕ ಭಾರತೀಯರಲ್ಲಿ ಜಾಗೃತಿಯ ಕೊರತೆಯಿದೆ. ಅಷ್ಟೇ ಅಲ್ಲ ಖನ್ನತೆಯ ಕಾಯಿಲೆಗೆ ಚಿಕಿತ್ಸೆ ಕೂಡಾ ದುಬಾರಿಯಾಗಿದೆ. ಈ ವಿಷಯವಾಗಿ ಕೆಲವು ಎನ್‌ಜಿಓ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆಯಾದರೂ, ಅವುಗಳಿಗೆ ಸಮರ್ಪಕವಾದ ರೀತಿಯಲ್ಲಿ ಜನಸಾಮಾನ್ಯರನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ.
2014ರವರೆಗೂ ಭಾರತವು, ಪ್ರಜೆಗಳ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ತನ್ನ ಒಟ್ಟು ಆರೋಗ್ಯ ಬಜೆಟ್‌ನ ಶೇ. 1ರಷ್ಟು, ಅನುದಾನವನ್ನು ಮೀಸಲಿರಿಸಿತ್ತು. ಭಾರತದ ಪ್ರಪ್ರಥಮ ಅಧಿಕೃತ ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿಯನ್ನು 2014ರ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಲಾಯಿತು.
ಮಾನಸಿಕ ಆರೋಗ್ಯ ಪಾಲನೆಗಾಗಿನ ಹೂಡಿಕೆಯು, ಎಲ್ಲಾ ಆದಾಯ ವರ್ಗಗಳ ದೇಶಗಳಿಗೂ ಉತ್ತಮವಾದುದೆಂದು ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಧ್ಯಯನ ವರದಿಯೊಂದು ಅಭಿಪ್ರಾಯಿಸಿದೆ. ಮಾನಸಿಕ ರೋಗಿಗಳ ಚಿಕಿತ್ಸೆಗೆ ಮಾಡಲಾಗುವ ಹೂಡಿಕೆಯ ನಾಲ್ಕು ಪಟ್ಟು ಹೆಚ್ಚು ಆರ್ಥಿಕ ಆದಾಯ ದೊರೆಯುವುದೆಂದು ಅದು ಹೇಳಿದೆ. ಡಬ್ಲುಎಚ್‌ಓನ ಈ ಅನಿಸಿಕೆಯು ಜಗತ್ತಿನಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳು ಬೃಹತ್ ಪ್ರಮಾಣದಲ್ಲಿ ತಾಂಡವವಾಡುತ್ತಿವೆಯೆಂಬುದಕ್ಕೆ ಉಜ್ವಲ ನಿದರ್ಶನವಾಗಿದೆ.