ಮಾಕೋನಹಳ್ಳಿ: ಮರಿಯನದಿಣ್ಣೆ ಪರಿಶಿಷ್ಟರ ಕಾಲನಿಯ ಮೂವರ ಕಿಡ್ನಿ ವೈಫಲ್ಯ

ಇಲ್ಲಿ ಕಳೆದ 10 ವರ್ಷಗಳಲ್ಲಿ 4 ಮಂದಿ ಕಿಡ್ನಿ ವೈಫಲ್ಯಕ್ಕೆ ಬಲಿ: ಗ್ರಾಮಸ್ಥರಲ್ಲಿ ಆತಂಕದ ವಾತಾವರಣ
ಕುಡಿಯುವ ನೀರಿನ ಮೂಲಕ ರೋಗ ಹರಡಿಲ್ಲ: ಆರೋಗ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆ
ಚಿಕ್ಕಮಗಳೂರು, ಎ.23: ಪರಿಶಿಷ್ಟ ಜಾತಿಯ ಸುಮಾರು 35 ಕುಟುಂಬಗಳು ವಾಸಿಸುವ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಪಂ ವ್ಯಾಪ್ತಿಯ ಮರಿಯನದಿಣ್ಣೆ ಕಾಲನಿಯ ಜನರು ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ.
ಕಿಡ್ನಿ ವೈಫಲ್ಯ, ಗಂಟಲು ನೋವು, ಥೈರಾಯೀಡ್, ಜಾಂಡೀಸ್, ಇಲಿ ಜ್ವರದಂತ ರೋಗಗಳಿಂದ ಬಳಲುತ್ತಿರುವ ಶಂಕೆ ಗ್ರಾಮಸ್ಥರಿಂದ ವ್ಯಕ್ತವಾಗಿವೆ. ಇದೀಗ 3 ಮಂದಿ ಮಂಗಳೂರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾಲನಿಯಲ್ಲಿ ಕಳೆದ 10 ವರ್ಷಗಳಿಂದ ಕಿಡ್ನಿ ವೈಫಲ್ಯಕ್ಕೊಳಗಾದ 4 ಮಂದಿ ಪ್ರಾಣ ಕಳೆದುಕೊಂಡಿರುವ ದಾಖಲೆಗಳಿವೆ.
ಕಳೆದ 10 ತಿಂಗಳಿನಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಕರುಣ (20) ಮತ್ತು ಮೋಹನ(29) ಎಂಬವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೋಹನ (24) ಎಂಬಾತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 2006ರಲ್ಲಿ ಸರೋಜಾ (25), 20014 ರಲ್ಲಿ ಪ್ರಕಾಶ (28), ಶೇಷಯ್ಯ(25) ಹಾಗೂ ಕವಿತಾ (23) ಸಹಿತ ನಾಲ್ಕು ಮಂದಿ ಕಿಡ್ನಿ ವೈಫಲ್ಯದಿಂದಲೇ ಮೃತಪಟ್ಟಿರುವ ಮಾಹಿತಿ ಇದೆ. ಅಲ್ಲದೇ ಗ್ರಾಮದಲ್ಲಿ ಹಲವರು ಜಾಂಡೀಸ್ ಖಾಯಿಲೆಗೂ ತುತ್ತಾಗಿದ್ದಾರೆ. ಇಲಿ ಜ್ವರದ ಶಂಕೆಯೂ ಇಲ್ಲಿದ್ದು, ಜನರನ್ನು ದಂಗು ಬಡಿಯುವಂತೆ ಮಾಡಿದೆ.
ಇಲ್ಲಿನ ಜನರು ಎದುರಿಸುತ್ತಿರುವ ಮಾರಕ ರೋಗಗಳಿಗೆ ಕಲುಷಿತ ಕುಡಿಯುವ ನೀರು ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಗ್ರಾಮಸ್ಥರು ಅನೇಕ ಸಲ ಮಾಕೋನಹಳ್ಳಿ ಗ್ರಾಪಂ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ 2004ರಲ್ಲಿ ನಿರ್ಮಿಸಿರುವ ಕುಡಿಯುವ ನೀರು ಒದಗಿಸುವ ಬಾವಿಯನ್ನು ಸ್ವಚ್ಚಗೊಳಿಸಲು ಮೊರೆ ಇಟ್ಟರೂ ಈ ತನಕ ಪ್ರಯೋಜನವಾಗಿಲ್ಲ.
ಈ ಬಾವಿಯ ಅನತಿ ದೂರದಲ್ಲಿ ನೀರಿನ ಕಾಲುವೆಯೊಂದು ಹರಿಯುತ್ತದೆ. ಜನರು ಬಟ್ಟೆ ಮತ್ತು ಜಾನುವಾರು ತೊಳೆದ ಮಲೀನ ನೀರು ಹಾಗೂ ಶುಂಠಿ ಸಹಿತ ವಿವಿಧ ಬೆಳೆಗಳಿಗೆ ಬಳಸಿದ ರಾಸಾಯನಿಕಗಳು ಈ ಕಾಲುವೆಯಲ್ಲ್ಲಿ ಹರಿಯುತ್ತವೆ. ಮೋಟಾರು ಪಂಪ್ ಮೂಲಕ ಬಾವಿಯ ನೀರನ್ನು ಟ್ಯಾಂಕ್‌ಗೆ ತುಂಬಿಸುವ ವೇಳೆ ಕಾಲುವೆಯ ಕಲುಷಿತ ನೀರು ಕೊಳವೆ ಮೂಲಕ ಹರಿದು ಬಾವಿಯೊಳಗೆ ಸೇರುತ್ತದೆ ಎಂದು ಸ್ಥಳೀಯರಾದ ಗೀತಾ, ಅನೂಪ, ಚಂದ್ರ, ರಮೇಶ್, ಲೋಕೇಶ್, ಪ್ರಕಾಶ, ಉದ್ದಯ್ಯ ಆತಂಕ ವ್ಯಕ್ತಪಡಿಸುತ್ತಾರೆ.
ಈ ಸುದ್ದಿ ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದು ಕಾಲನಿಗೆ ಎ. 21ರಂದು ಮೂಡಿಗೆರೆ ತಾಪಂ ಅಧಿಕಾರಿ ರುದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಯೋಗೀಶ್, ಆರೋಗ್ಯ ಸಹಾಯಕ ಡಿ.ಮೂರ್ತಿ, ಮಾಕೋನಹಳ್ಳಿ ಗ್ರಾಪಂ ಪಿಡಿಒ ಸಹಿತ ಕೆಲವು ಅಧಿಕಾರಿಗಳು ಭೇಟಿ ನೀಡಿ ತುರ್ತು ಆರೋಗ್ಯ ತಪಾಷಣೆ ನಡೆಸಿದ್ದಾರೆ. ಅಲ್ಲದೇ ಶುದ್ಧ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಬಾವಿ ಶುಚಿಗೊಳಿಸುವ, ಇಲ್ಲವೇ ಬೋರ್‌ವೆಲ್ ಕೊರೆಸುವ ಭರವಸೆ ನೀಡಿದ್ದಾರೆ.
ಮರಿಯನದಿಣ್ಣೆ ಕಾಲನಿಯ ಮೂರು ಮಂದಿ ಕಿಡ್ನಿ ವೈಪಲ್ಯದಿಂದ ಬಳಲಲು ಕುಡಿಯುವ ನೀರಿನ ಸಮಸ್ಯೆ ಕಾರಣವಲ್ಲ. ಕುಡಿಯುವ ನೀರನ್ನು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ನೀರು ಕುಡಿಯಲು ಯೋಗ್ಯವಾಗಿರುವುದು ಪರೀಕ್ಷೆಯಿಂದ ದೃಡಪಟ್ಟಿದೆ. ಕಾಲನಿಯಲ್ಲಿ ಕಳ್ಳಭಟ್ಟಿ ನಡೆಯುತ್ತಿದೆ. ಜಾಂಡೀಸ್ ಖಾಯಿಲೆಯೂ ಕೆಲವರಿಗಿದೆ. ನಾಟಿಕೋಳಿ ಮಾಂಸ ತಿನ್ನುವುದರಿಂದ ಜಾಂಡೀಸ್ ಹರಡುವ ಸಾಧ್ಯತೆ ಇದೆ ಎಂದು ಮಾಕೋನಹಳ್ಳಿ ಗ್ರಾಪಂ ಪಿಡಿಒ ಸುಭ್ರಮಣ್ಯ ಹೇಳುತ್ತಾರೆ.
ಆರೋಗ್ಯ ಸಿಬ್ಬಂದಿಗಳೊಂದಿಗೆ ಮರಿಯನದಿಣ್ಣೆಗೆ ತೆರಳಿ ತಪಾಷಣೆ ನಡೆಸಲಾಗಿದೆ. ರೋಗಿಗಳ ಮನೆ ಮಂದಿ ಒದಗಿಸಿದ ಆಸ್ಪತ್ರೆ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದೇವೆ. ಶಿವರಾಜ್ ಎಂಬವರಿಗೆ ಇಲಿಜ್ವರದಿಂದ ಕಿಡ್ನಿ ವೈಪಲ್ಯವಾಗಿರುವ ದಾಖಲೆ ಲಭ್ಯವಿದೆ. ಇನ್ನಿಬ್ಬರು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರೂ ಕಾರಣ ತಿಳಿದಿಲ್ಲ. ಬಾವಿಯ ನೀರನ್ನು ಗ್ರಾಪಂನವರು ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಗ್ಯ ಇಲಾಖೆಯು ನೀರಿನ ಸ್ಯಾಂಪಲನ್ನು ಪರೀಕ್ಷೆಗೆ ಕಳಿಸಲು ಸಂಗ್ರಹಿಸಿದೆ. ಕಾಲನಿಯ ಎಲ್ಲಾ ಜನರ ಆರೋಗ್ಯ ತಪಾಷಣೆ ನಡೆಸಲಾಗುವುದು ಎಂದು ತಾಲೂಕು ವೈಧ್ಯಾದಿಕಾರಿ ಡಾ. ಯೋಗೀಶ್ ಮಾಹಿತಿ ನೀಡಿದ್ದಾರೆ.







