ಪ್ರಧಾನಿ ಮೋದಿಯ ಇ ರಿಕ್ಷಾವನ್ನು ತೆಗೆದುಕೊಳ್ಳುವವರೇ ಇಲ್ಲ !

ನೊಯ್ಡಾ, ಎ.23: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ವಿತರಿಸಿದ ಇ-ರಿಕ್ಷಾವನ್ನು ಕೊಂಡುಕೊಳ್ಳಲು ನೊಯ್ಡಾ, ಘಾಝಿಯಾಬಾದ್‌ನಲ್ಲಿ ಫಲಾನುಭವಿಗಳೇ ಇಲ್ಲದ ವಿಚಾರ ಬೆಳಕಿಗೆ ಬಂದಿದೆ.
ಬ್ಯಾಟರಿ ಚಾಲಿತ ಸುಮಾರು ಎರಡು ಸಾವಿರ ರಿಕ್ಷಾಗಳನ್ನು ನೊಯ್ಡಾದ ಸೆಕ್ಟರ್ 62ರ ಎನ್‌ಐಬಿ ಆವರಣದಲ್ಲಿ ನಿಲ್ಲಿಸಲಾಗಿದ್ದರೂ ಅವೆಲ್ಲವೂ ಧೂಳು ತಿನ್ನುತ್ತಿದೆ.
ಪ್ರಧಾನಿ ಮಂತ್ರಿ ಮುದ್ರಾ ಯೋಜನೆಯಡಿ 5,100 ರಿಕ್ಷಾಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಪೈಕಿ ನೊಯ್ಡಾ ಮತ್ತು ಘಾಝಿಯಾಬಾದ್‌ಗೆ ಸಾವಿರ ಇ- ರಿಕ್ಷಾಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು.
ಈ ತನಕ 352 ಲೈಸೆನ್ಸ್‌ಗಳನ್ನು ವಿತರಿಸಲಾಗಿತ್ತು. ಆದರೆ ಈ ವರೆಗೆ ರಿಕ್ಷಾ ರೂಟ್ ಪರ್ಮಿಟ್‌ಗೆ ಯಾರೂ ಅರ್ಜಿ ಸಲ್ಲಿಸಿಲ್ಲ ಎಂದು ನೊಯ್ಡಾದ ಸಾರಿಗೆ ನಿರೀಕ್ಷಕರಾದ ಮಹೇಶ್ ಶರ್ಮ ತಿಳಿಸಿದ್ದಾರೆ. ಇ-ರಿಕ್ಷಾ ಬೆಲೆ 1.60 ಲಕ್ಷ ರೂ.ಗಳಿಂದ 1.70 ಲಕ್ಷ ರೂ.
ಭಾರತ ಮೈಕ್ರೊ ಕ್ರೆಡಿಟ್(ಬಿಎಂಸಿ) , ಲಕ್ನೊ ಮೂಲದ ಮೈಕ್ರೊಫೈನಾನ್ಸ್ ಕಂಪೆನಿ ರಿಕ್ಷಾ ಖರೀದಿಸಲು ಸಾಲಸೌಲಭ್ಯವನ್ನು ಒದಗಿಸುತ್ತಿದೆ. ಆದರೆ ಈ ಫೈನಾನ್ಸ್ ಕಂಪನಿಗಳು ರಿಸರ್ವ್ ಬ್ಯಾಂಕ್‌ನ ಅನುಮತಿ ಪಡೆದಿಲ್ಲ ಎಂದು ತಿಳಿದು ಬಂದಿದೆ. ರಿಕ್ಷಾ ಖರೀದಿಗೆ ಜನ ಮುಂದೆ ಬಾರದಿರಲು ಇದು ಒಂದು ಕಾರಣ ಎನ್ನಲಾಗಿದೆ.





